ನವದೆಹಲಿ:ಲೋಕಸಭೆಯಲ್ಲಿ ಬುಧವಾರ ಎಲೆಕ್ಟ್ರಾನಿಕ್ ಸಿಗರೇಟ್ ಮಾರಾಟ ಮತ್ತು ಉತ್ಪಾದನೆಯನ್ನು ನಿಷೇಧಿಸುವ ಮಸೂದೆ ಅಂಗೀಕಾರಗೊಂಡಿದ್ದು, ಆರೋಗ್ಯ ಸಚಿವ ಹರ್ಷವರ್ಧನ್ ಅವರು, 'ಯುವ ಸಮುದಾಯವನ್ನು ಮಾದಕ ವಸ್ತುಗಳಿಂದ ರಕ್ಷಿಸಲು ಈ ಕ್ರಮ ಅಗತ್ಯವಾಗಿದೆ. ಹೊಸ ಫ್ಯಾಷನ್ ಉತ್ತೇಜಿಸುವ ಕಂಪನಿಗಳಿಗೆ ಕಡಿವಾಣ ಬೀಳಲಿದೆ' ಎಂದಿದ್ದಾರೆ.
ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ (ಉತ್ಪಾದನೆ, ಆಮದು, ರಫ್ತು, ಸಾಗಣೆ, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತು) ಮಸೂದೆ 2019, ಸೆಪ್ಟೆಂಬರ್ 18ರಂದು ಹೊರಡಿಸಲಾದ ಸುಗ್ರೀವಾಜ್ಞೆಗೆ ಇಂದು ಲೋಕಸಭೆಯಲ್ಲಿ ಅನುಮೋದನೆಗೊಂಡಿದೆ. ಇ-ಸಿಗರೇಟ್ ನಿಷೇಧದ ಸುಗ್ರೀವಾಜ್ಞೆ ವಿರೋಧಿಸಿದ ಪ್ರತಿಪಕ್ಷ ಸದಸ್ಯರು ಶಾಸನಬದ್ಧ ನಿರ್ಣಯವನ್ನು ಧ್ವನಿ ಮತದಿಂದ ಸೋಲಿಸಿದರು. ಪ್ರತಿಪಕ್ಷ ಸದಸ್ಯರು ಮಂಡಿಸಿದ ಹಲವು ತಿದ್ದುಪಡಿಗಳನ್ನು ಸದನವು ತಿರಸ್ಕರಿಸಿತು.
ಮಸೂದೆಯ ಕುರಿತು ಮಾತನಾಡಿದ ಹರ್ಷವರ್ಧನ್, ಹತ್ತನೇ ಮಹಡಿ ಅಥವಾ ಆರನೇ ಮಹಡಿಯಿಂದ ಬಿದ್ದರೂ ಅವನು/ ಅವಳು ಗಾಯಗೊಳ್ಳುತ್ತಾರೆ. ಇಂತಹ ಮಾದಕ ವಸ್ತು ನಿಷೇಧಕ್ಕೆ ಸಮರ್ಥನೆ ಸಲ್ಲದು ಎಂದರು. ವಿರೋಧ ಪಕ್ಷಗಳು ಸೇರಿದಂತೆ ಹೆಚ್ಚಿನ ಪಕ್ಷಗಳು ಮಸೂದೆಗೆ ಬೆಂಬಲಿಸಿದವು. ಆದರೆ, ನಿಷೇಧ ಜಾರಿಗೆ ಸುಗ್ರೀವಾಜ್ಞೆಯಂತಹ ಮಾರ್ಗ ಅಳವಡಿಸಿಕೊಂಡ ಸರ್ಕಾರದ ನಡೆಯನ್ನು ಪ್ರಶ್ನಿಸಿದರು.