ಬೆಂಗಳೂರು: ಕಳೆದ ವರ್ಷ ಕೈಗಾ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವು 941 ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದಿಸಿ ವಿಶ್ವದಾಖಲೆ ಬರೆಯಿತು. ಈ ಮೂಲಕ ಇಂಗ್ಲೆಂಡ್‌ನ ಹೇಶಮ್ ಅಣು ವಿದ್ಯುತ್ ಉತ್ಪಾದನಾ ಸ್ಥಾವರದ ದಾಖಲೆಯನ್ನು ಅಳಿಸಿಹಾಕಿತ್ತು. ಕೆಲ ದಿನಗಳ ಹಿಂದೆ ಸ್ಥಗಿತಗೊಂಡಿದ್ದ ಘಟಕವೊಂದು ಮತ್ತೆ ಆರಂಭಗೊಂಡಿದೆ.
ರಾಜ್ಯದ ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ (ಕೆಜಿಎಸ್) 220 ಮೆಗಾವ್ಯಾಟ್ ಸಾಮರ್ಥ್ಯದ 3ನೇ ಪರಮಾಣು ವಿದ್ಯುತ್ ಘಟಕವು ಬುಧವಾರ ಸಂಜೆಯಿಂದ ತನ್ನ ವಿದ್ಯುತ್ ಉತ್ಪಾದನೆ ಪುನರಾರಂಭಿಸಿದೆ ಎಂದು ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ (ಪೊಸೊಕೊ) ತಿಳಿಸಿದೆ.
ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ಗೆ (ಎನ್‌ಪಿಸಿಐಎಲ್) ಸೇರಿದ ಘಟಕವು ನವೆಂಬರ್ 5ರಂದು ಜನರೇಟರ್ ಪ್ರೊಟೆಕ್ಷನ್ ಆಪರೇಟೆಟ್ಗಾಗಿ ಉತ್ಪಾದನೆಯನ್ನು ಕೆಲ ದಿನಗಳ ಮಟ್ಟಿಗೆ ಸ್ಥಗಿತಗೊಳಿಸಿತ್ತು.
ಕೆಜಿಎಸ್‌ನಲ್ಲಿರುವ ನಾಲ್ಕು ಘಟಕಗಳು 220 ಮೆಗಾ ವ್ಯಾಟ್ ಪರಮಾಣು ವಿದ್ಯುತ್ ಉತ್ಪಾದಿಸುತ್ತಿವೆ. ಬುಧವಾರ ನಾಲ್ಕು ಘಟಕಗಳಿಂದ ಸುಮಾರು 653 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಿದೆ.
ಮದ್ರಾಸ್ ಪರಮಾಣು ವಿದ್ಯುತ್ ಕೇಂದ್ರದಲ್ಲಿರುವ (ಎಂಎಪಿಎಸ್) ಮೊದಲ 220 ಮೆಗಾ ವ್ಯಾಟ್ ಘಟಕವು ವಾರ್ಷಿಕ ನಿರ್ವಹಣೆಗಾಗಿ 2018ರ ಜನವರಿ 30ರಂದು ಸ್ಥಗಿತಗೊಂಡಿತ್ತು. ಡಿಸೆಂಬರ್ 1ರಿಂದ ಉತ್ಪಾದನೆ ಪುನರಾರಂಭಿಸುವ ನಿರೀಕ್ಷೆಯಿದೆ.