ವಾಷಿಂಗ್ಟನ್ : ಕೊರೊನಾ ವೈರಸ್ ವಿಶ್ವ ಆರ್ಥಿಕತೆಯನ್ನು ಹಿಂಜರಿತಕ್ಕೆ ಕೊಂಡೊಯ್ದಿದೆ. ಇದು 2009ರ ವಿತ್ತೀಯ ಕುಸಿತಕ್ಕಿಂತ ತುಂಬಾ ಕೆಟ್ಟದಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಖ್ಯಸ್ಥ ಕ್ರಿಸ್ಟಲಿನಾ ಜಾರ್ಜೀವಾ ಹೇಳಿದ್ದಾರೆ.
ನಾವು ಆರ್ಥಿಕ ಹಿಂಜರಿತವನ್ನು 2009ಕ್ಕಿಂತ ಕೆಟ್ಟದಾದ ಪರಿಸ್ಥಿತಿಗೆ ಪ್ರವೇಶಿಸಿದ್ದೇವೆ ಎಂಬುದು ಸ್ಪಷ್ಟ. ವಿಶ್ವ ಆರ್ಥಿಕತೆಯ ಹಠಾತ್ ನಿಲುಗಡೆಯು ದಿವಾಳಿತನಕ್ಕೆ ಕಾರಣವಾಗಿದೆ. ಅದು ಚೇತರಿಕೆಯನ್ನು ದುರ್ಬಲಗೊಳಿಸುವುದಲ್ಲದೆ ನಮ್ಮ ಸಮಾಜವನ್ನು ಸವೆಯುವಂತೆ ಮಾಡುತ್ತಿದೆ ಎಂದು ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಉದಯೋನ್ಮುಖ ಮಾರುಕಟ್ಟೆಗಳು ಪ್ರಸ್ತುತ ಬಿಕ್ಕಟ್ಟಿನಿಂದ ಹೊರ ಬರಲು ಅಂದಾಜು 2.5 ಟ್ರಿಲಿಯನ್ ಡಾಲರ್ ನಿಧಿಯ ಅವಶ್ಯಕತೆ ಇದೆ. 80ಕ್ಕೂ ಅಧಿಕ ರಾಷ್ಟ್ರಗಳು ಈಗಾಗಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ತುರ್ತು ಸಹಾಯವನ್ನು ಕೋರಿವೆ ಎಂದರು.
ಈಗ ಆರ್ಥಿಕ ಹಿಂಜರಿತದಲ್ಲಿದೆ. 2021ರಲ್ಲಿ ಕೊರೊನಾ ವೈರಸ್ ಜಗತ್ತಿನಾದ್ಯಂತ ಇದ್ದರೆ ಚೇತರಿಕೆ ಅಸಾಧ್ಯ. ನಾವು 2021ರಲ್ಲಿ ಚೇತರಿಕೆಯ ಬಗ್ಗೆ ಯೋಚಿಸುತ್ತೇವೆ. ಎಲ್ಲ ಕಡೆಗಳಲ್ಲಿ ವೈರಸ್ ಹರಡುವಿಕೆ ತಗ್ಗಿಸುವಲ್ಲಿ ಯಶಸ್ವಿಯಾದರೆ ದ್ರವ್ಯತೆ ಸಮಸ್ಯೆಗಳು ಪರಿಹಾರ ಕಾಣಲಿವೆ ಎಂದು ಜಾರ್ಜೀವಾ ಹೇಳಿದರು.