ನವದೆಹಲಿ : ಆರೋಗ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ವಿಮೆ ವ್ಯಾಪ್ತಿ ವಿಸ್ತರಿಸುವ ಉದ್ದೇಶದಿಂದ 'ಆರೋಗ್ಯ ಸಂಜೀವಿನಿ' ಪಾಲಿಸಿಯನ್ನು ಗುಂಪು ಆರೋಗ್ಯ ವಿಮಾ ಸೇವೆಯಾಗಿ ನೀಡಲು ವಿಮಾ ನಿಯಂತ್ರಕ ಐಆರ್‌ಡಿಎಐ ಅನುಮತಿಸಿದೆ.
ಆರೋಗ್ಯ ಸಂಜೀವಿನಿ ನೀತಿಯು ವೈಯಕ್ತಿಕ ಅಥವಾ ಗ್ರೂಪ್ ಫಾರ್ಮ್ನಲ್ಲಿದ್ದರೂ ಸಹ ಕೋವಿಡ್-19 ರೋಗ ಚಿಕಿತ್ಸೆಯನ್ನು ಒಳಗೊಂಡಿರುತ್ತದೆ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ತಿಳಿಸಿದೆ.
ಗ್ರೂಪ್ ಪಾಲಿಸಿಯು ಉತ್ಪಾದನೆ, ಸೇವೆ, ಎಸ್‌ಎಂಇ, ಎಂಎಸ್‌ಎಂಇ, ಲಾಜಿಸ್ಟಿಕ್ಸ್ ವಲಯ ಮತ್ತು ವಲಸೆ ಕಾರ್ಮಿಕ ಕ್ಷೇತ್ರದಲ್ಲಿ ತೊಡಗಿರುವ ಬಹು ಸಂಖ್ಯೆಯ ನೌಕರರಿಗೆ ಅವರ ವೈದ್ಯಕೀಯ ಅಗತ್ಯಗಳನ್ನು ಪೂರೈಸುವ ರಕ್ಷಣೆ ನೀಡುತ್ತದೆ ಎಂದು ಪ್ರಾಧಿಕಾರ ಹೇಳಿದೆ. ಇದು ವಿವಿಧ ಖಾಸಗಿ ಮತ್ತು ತಮ್ಮ ನೌಕರರ ವೈದ್ಯಕೀಯ ಅಗತ್ಯಗಳನ್ನು ಪೂರೈಸುವ ಸಾರ್ವಜನಿಕ ಸಂಸ್ಥೆಗಳಿಗೂ ಉಪಯೋಗವಾಗಲಿದೆ.
ಸ್ಟ್ಯಾಂಡರ್ಡ್ ಆರೋಗ್ಯ ಸಂಜೀವಿನಿ ಪಾಲಿಸಿಯಂತಲ್ಲದೆ ಗ್ರೂಪ್ ಪಾಲಿಸಿಯಡಿ ವಿಮಾದಾರರಿಗೆ ತಮ್ಮದೇ ಆದ ಕನಿಷ್ಠ ಮತ್ತು ಗರಿಷ್ಠ ಮೊತ್ತದ ವಿಮೆ ಮಿತಿ ನಿಗದಿಪಡಿಸಲು ಅವಕಾಶ ನೀಡಲಾಗುವುದು ಎಂದು ಐಆರ್ಟಿಎಐ ತಿಳಿಸಿದೆ.
ವಿಮೆದಾರರಿಗೆ 'ಗ್ರೂಪ್' ಎಂಬ ಪದ ಸೇರಿಸಿದ ಬಳಿಕ ಪ್ರಮಾಣಿತ ಉತ್ಪನ್ನದ ಹೆಸರನ್ನು ಬಳಸಲು ಅನುಮತಿಸಲಾಗಿದೆ. ವೈಯಕ್ತಿಕ ಪಾಲಿಸಿಗೆ ಅನ್ವಯವಾಗುವ ಎಲ್ಲಾ ನಿಯಮ ಮತ್ತು ಷರತ್ತುಗಳು ಪ್ರೀಮಿಯಂ ದರ ಮತ್ತು ಗ್ರೂಪ್ ಪಾಲಿಸಿ ಕಾರ್ಯಾಚರಣೆಯ ನಿರ್ದಿಷ್ಟತೆ ಹೊರತುಪಡಿಸಿ ಒಂದೇ ಆಗಿರುತ್ತವೆ ಎಂದು ಸ್ಪಷ್ಟ ಪಡಿಸಿದೆ.
ಆರೋಗ್ಯ ವಿಮೆದಾರರಿಗೆ ಕನಿಷ್ಟ 1 ಲಕ್ಷ ರೂ.ಗಿಂತ ಕಡಿಮೆ ವಿಮೆ ಮತ್ತು ಗರಿಷ್ಠ 5 ಲಕ್ಷ ರೂ.ಗಿಂತ ಅಧಿಕ ವಿಮೆ ನೀಡಲು ನಿಯಂತ್ರಕ ಪ್ರಾಧಿಕಾರ ಇತ್ತೀಚೆಗೆ ಆರೋಗ್ಯ ಸಂಜೀವಿನಿ ನೀತಿಯ ಮಾನದಂಡಗಳನ್ನು ಮಾರ್ಪಡಿಸಿತ್ತು.