ನವದೆಹಲಿ: ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಯೋಜನೆಗೆ ಅನುಗುಣವಾಗಿ ಸಮಗ್ರ ಮೂಲಸೌಕರ್ಯ ಮತ್ತು ಸಂಘಟಿತ ಪ್ರಯತ್ನಗಳು ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.
2025-26ರ ವೇಳೆಗೆ ಒಂದು ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸುವ ಕೋಲ್ ಇಂಡಿಯಾ ಲಿಮಿಟೆಡ್‌ನ ಮಿಷನ್ ಅನ್ನು ಪರಿಶೀಲಿಸಲು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಸಭೆಯಲ್ಲಿ ಈ ವಿಷಯ ಚರ್ಚಿಸಲಾಗಿದೆ.
ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಾಜಿಸ್ಟಿಕ್ ವೆಚ್ಚಗಳನ್ನು ಕಡಿಮೆ ಮಾಡಲು ಹಾಗೂ ಆರ್ಥಿಕತೆ ಹೆಚ್ಚಿಸಲು ಮೂಲಸೌಕರ್ಯ ಅಭಿವೃದ್ಧಿಪಡಿಸುವ ಗುರಿ ಹೊಂದಿರುವ ಬಹು - ಮಾದರಿ ಸಂಪರ್ಕಕ್ಕಾಗಿ 100 ಲಕ್ಷ ಕೋಟಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ (NMP) ಪ್ರಾರಂಭಿಸಿದ್ದರು.
ಕಲ್ಲಿದ್ದಲು ಭಾರತಕ್ಕೆ ಪ್ರಾಥಮಿಕ ದೇಶೀಯ ಇಂಧನವಾಗಿ ಉಳಿದಿದೆ. ದೇಶಾದ್ಯಂತ ಸಾಗಿಸುವ ಏಕೈಕ ಅತಿದೊಡ್ಡ ಸರಕು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಪಿಎಂ ಗತಿ ಶಕ್ತಿಗೆ ಅನುಗುಣವಾಗಿ, ಎಲ್ಲ ಮೂಲಸೌಕರ್ಯ ಸಚಿವಾಲಯಗಳ ಸಂಘಟಿತ ಪ್ರಯತ್ನಗಳೊಂದಿಗೆ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಯು ಕಲ್ಲಿದ್ದಲು ಉತ್ಪಾದನೆ ಮತ್ತು ಬಹು - ಮಾದರಿ ಸಂಪರ್ಕದ ಮೂಲಕ ಸ್ಥಳಾಂತರಿಸುವ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಹೇಳಿದೆ.
ಸಭೆಯಲ್ಲಿ ಚರ್ಚಿಸಿದಂತೆ, 2030ರ ಹಣಕಾಸು ವರ್ಷದ ವೇಳೆಗೆ ರೈಲ್ವೆಯ ಪಾಲನ್ನು ಶೇ.64 ರಿಂದ 75ಕ್ಕೆ ವಿಸ್ತರಿಸುವ ಗುರಿಯೊಂದಿಗೆ ಕಲ್ಲಿದ್ದಲಿನ ಪ್ರಮುಖ ಸ್ಥಳಾಂತರಿಸುವ ವಿಧಾನವಾಗಿ ರೈಲು ಉಳಿದಿದೆ. ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ಹೆಚ್ಚಿದ ಕಲ್ಲಿದ್ದಲು ರವಾನೆಯನ್ನು ಪೂರೈಸಲು, ಗತಿ ಶಕ್ತಿ ನಿಯಮಗಳಿಗೆ ಅನುಗುಣವಾಗಿ 14 ರೈಲ್ವೆ ಮೂಲಸೌಕರ್ಯ ಯೋಜನೆಗಳು ಅನುಷ್ಠಾನದಲ್ಲಿವೆ.
ಇದನ್ನೂ ಓದಿ: ಜನವರಿಯಿಂದ ತೈಲ ಉತ್ಪಾದನೆ ಪ್ರಮಾಣ ನಿಗದಿ ನಿರ್ಧಾರಕ್ಕೆ ಬದ್ಧವಾದ ಒಪೆಕ್+ ರಾಷ್ಟ್ರಗಳು