ನವದೆಹಲಿ: ಫೆಬ್ರವರಿ ತಿಂಗಳಲ್ಲಿ ಕೊನೆಗೊಂಡ ಕೈಗಾರಿಕಾ ಉತ್ಪಾದನಾ ಹೆಚ್ಚಳದ ಪ್ರಮಾಣವು 20 ತಿಂಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್ಒ) ತಿಳಿಸಿದೆ.
ಕೇಂದ್ರದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ಬಿಡುಗಡೆಯಾಗಿರುವ ಕೊನೆಯ ದತ್ತಾಂಶದ ಪ್ರಕಾರ, ಕೈಗಾರಿಕಾ ಉತ್ಪಾದನೆಯು ಕೇವಲ ಶೇ 0.1ರಷ್ಟು ಬೆಳವಣಿಗೆ ಕಂಡಿ ರುವುದನ್ನು ಸೂಚಿಸಿದೆ.
ಭಾರಿ ಯಂತ್ರೋಪಕರಣ ಉತ್ಪಾದನಾ ಪ್ರಮಾಣ (-) ಶೇ 8.8 ಮತ್ತುಒಟ್ಟಾರೆ ತಯಾರಿಕಾ ವಲಯವು (-) ಶೇ 0.3ರಷ್ಟು ಕುಸಿತ ಕಂಡಿರುವುದು ಕೈಗಾರಿಕಾ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದಕ್ಕೂ ಹಿಂದೆ, 2017ರ ಜೂನ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಪ್ರಮಾಣವು ಶೇ 0.3ಕ್ಕೆ ಕುಸಿದಿತ್ತು.
![IIP](https://etvbharatimages.akamaized.net/etvbharat/images/2994508_iip.jpg)
ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ (ಐಐಪಿ) ಅಳೆಯಲಾಗುವ ಕಾರ್ಖಾನೆಗಳ ಉತ್ಪಾದನೆ ಪ್ರಮಾಣವು 2018ರ ಫೆಬ್ರವರಿಯಲ್ಲಿ ಶೇ 6.9ರಷ್ಟು ಬೆಳವಣಿಗೆ ಸಾಧಿಸಿತ್ತು.
2018ರ ನವೆಂಬರ್ ತಿಂಗಳ ‘ಐಐಪಿ’ ಪ್ರಗತಿಯನ್ನು ಪರಿಷ್ಕರಿಸಿ ಬೆಳವಣಿಗೆ ದರವನ್ನು ಈ ಮೊದಲಿನ ಶೇ 0.3ರಿಂದ ಶೇ 0.2ಕ್ಕೆ ತಗ್ಗಿಸಲಾಗಿದೆ. 2018-19ರ ಏಪ್ರಿಲ್ ಮತ್ತು ಫೆಬ್ರವರಿ ಅವಧಿಯಲ್ಲಿ ಕೈಗಾರಿಕಾ ಉತ್ಪಾದನೆಯು ಶೇ 4ರಷ್ಟು ಪ್ರಗತಿ ಕಂಡಿತ್ತು. ಅದಕ್ಕೂ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ಶೇ 4.3ರಷ್ಟಿತ್ತು.
ತಯಾರಿಕಾ ವಲಯದ ಉತ್ಪಾದನೆ ಕುಸಿದಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ (ಭಾರತದಲ್ಲಿಯೇ ತಯಾರಿಸಿ) ಕಾರ್ಯಕ್ರಮಕ್ಕೆ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಚ್ಚೇ ದಿನ್ (ಒಳ್ಳೆಯ ದಿನಗಳು) ಬಂದಿದೆ ಎಂದು ಮತದಾರರನ್ನು ನಂಬಿಸುವುದು ಬಿಜೆಪಿಗೆ ಇನ್ನೂ ಕಠಿಣವಾಗಲಿದೆ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಂದೆಡೆ ಕೈಗಾರಿಕಾ ಉತ್ಪಾದನೆ ದರ ಕುಸಿತ ಕಂಡರೆ ಮತ್ತೊಂದೆಡೆ ಗ್ರಾಹಕರ ಬೆಲೆ ಸೂಚ್ಯಂಕ ಆಧರಿಸಿದ ಮಾರ್ಚ್ ತಿಂಗಳ ಹಣದುಬ್ಬರ ಕೂಡ ಶೇ 2.86ಕ್ಕೆ ಏರಿಕೆ ಕಂಡಿದೆ. ಪರಿಸ್ಥತಿ ಹೀಗಿರುವಾಗ, ಕೇಂದ್ರದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಆರ್ಬಿಐ ಇನ್ನೊಂದು ಸುತ್ತಿನ ಅಲ್ಪಾವಧಿ ಬಡ್ಡಿ ದರ ತಗ್ಗಿಸುವ ಮಾರ್ಗ ಸುಗಮವಾಗಿಲ್ಲ ಎಂಬುದು ಮಾರುಕಟ್ಟೆ ತಜ್ಞರ ವಾದ.