ನವದೆಹಲಿ: ಸಾಂಸ್ಥಿಕ ಮತ್ತು ಪರಿಸರ ನಿಯಂತ್ರಕ ಅನಿಶ್ಚಿತತೆ ಹಾಗೂ ಕೆಲವು ಬ್ಯಾಂಕೇತರ ಹಣಕಾಸು ಕಂಪನಿಗಳ ದೀರ್ಘಕಾಲದ ದೌರ್ಬಲ್ಯದಿಂದಾಗಿ ಭಾರತದ ಆರ್ಥಿಕ ಬೆಳವಣಿಗೆಯು ನಿರೀಕ್ಷೆಗಿಂತ ಹೆಚ್ಚು ದುರ್ಬಲವಾಗಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಿಳಿಸಿದೆ.
ಭಾರತದಲ್ಲಿ ಇತ್ತೀಚಿನ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತಲೂ ದುರ್ಬಲವಾಗಿದೆ. ಮುಖ್ಯವಾಗಿ, ಕಾರ್ಪೊರೇಟ್ ಮತ್ತು ಪರಿಸರ ನಿಯಂತ್ರಕ ಅನಿಶ್ಚಿತತೆ ಮತ್ತು ಕೆಲವು ಬ್ಯಾಂಕೇತರ ಹಣಕಾಸು ಕಂಪನಿಗಳು ದೀರ್ಘಕಾಲದ ದೌರ್ಬಲ್ಯ ಹೊಂದಿವೆ. ಅವುಗಳ ದೃಷ್ಟಿಕೋನದ ಅಪಾಯಗಳನ್ನು ಹೇಳಲು ಇಚ್ಚಿಸುತ್ತೇವೆ. ಈಗಾಗಲೇ ಅವು ತೊಂದರೆಯತ್ತ ಮುಖಮಾಡಿವೆ ಎಂದು ಐಎಂಎಫ್ ವಕ್ತಾರ ಗೆರ್ರಿ ರೈಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ರು.
ಕೇಂದ್ರ ಸಂಖ್ಯಾಶಾಸ್ತ್ರ ಕಚೇರಿ ಇತ್ತೀಚೆಗೆ ಬಿಡುಗಡೆ ಮಾಡಿದ ಭಾರತದ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ಶೇ 5.08ರಿಂದ ಶೇ 5ಕ್ಕೆ ಕುಸಿದಿದೆ. ಕಳೆದ ತ್ರೈಮಾಸಿಕದ ಜಿಡಿಪಿಗೆ ಹೋಲಿಸಿದರೆ ಶೇ 0.8ರಷ್ಟು ಕುಸಿತಗೊಂಡಿದೆ. ಇದು ಏಳು ವರ್ಷಗಳ ಅತ್ಯಂತ ಕಳಪೆ ಜಿಡಿಪಿಯಾಗಿದೆ. ದೇಶೀಯ ಬೇಡಿಕೆಯು ನಿರೀಕ್ಷೆಗಿಂತಲೂ ದುರ್ಬಲ ದೃಷ್ಟಿಕೋನ ಹೊಂದಿದ ಕಾರಣದಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿ 2019-20ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಗೆ ಮುನ್ನೋಟವನ್ನು ಶೇ 0.3 ಅಂಶಗಳು ಕಡಿತಗೊಳಿಸಿ ಶೇ 7ಕ್ಕೆ ನಿಗದಿಪಡಿಸಿದೆ.
2021ರ ವಿತ್ತೀಯ ವರ್ಷದ ಬೆಳವಣಿಗೆಯ ದರವನ್ನು ಶೇ 7.5ರಷ್ಟು ನಿರೀಕ್ಷಿಸಿತ್ತು. ಈಗ ಇದನ್ನು ಶೇ 7.2ಕ್ಕೆ ಇಳಿಕೆ ಮಾಡಿದೆ. ಕಳೆದ ಕೆಲ ತಿಂಗಳಿಂದ ದೇಶದ ಒಟ್ಟು ಉತ್ಪಾದನಾ ವಲಯ ಕುಸಿತದತ್ತ ಸಾಗಿದೆ. ಉತ್ಪನ್ನ ಸರಕುಗಳು ಬೇಡಿಕೆ ಕಳೆದುಕೊಳ್ಳುತ್ತಿದ್ದು, ಮಾರುಕಟ್ಟೆಯ ವಲಯ ಹಿಡಿತ ಕಳೆದುಕೊಂಡಿದೆ.