ವಾಷಿಂಗ್ಟನ್: ಭಾರತ ಆರ್ಥಿಕತೆ (ಜಿಡಿಪಿ) 2019 ಮತ್ತು 2020ರಲ್ಲಿ ಕ್ರಮವಾಗಿ ಶೇ 7.3 ಹಾಗೂ ಶೇ 7.5ರಷ್ಟು ಬೆಳವಣಿಗೆ ಕಾಣಲಿದ್ದು, ಚೀನಾವನ್ನು ಹಿದಿಕ್ಕಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.
ಭಾರತದ ಆರ್ಥಿಕ ಬೆಳವಣಿಗೆಯು 2019ರಲ್ಲಿ ಶೇ 7.3 ಹಾಗೂ 2020ರಲ್ಲಿ ಶೇ 7.5ರಷ್ಟು ಇರಲಿದೆ. 2018ರಲ್ಲಿ ಆರ್ಥಿಕ ವೃದ್ಧಿ ದರವು ಚೀನಾದ್ದ ಶೇ 6.6ರಷ್ಟು ಇದ್ದರೇ ಭಾರತದ್ದು ಶೇ 7.1ರಷ್ಟಿತ್ತು ಎಂದು ಐಎಂಎಫ್ ಮತ್ತು ವಿಶ್ವ ಬ್ಯಾಂಕ್ನ ಸಭೆಗೂ ಮುನ್ನ ಬಿಡುಗಡೆಯಾದ ಜಾಗತಿಕ ಆರ್ಥಿಕತೆ ಔಟ್ಲುಕ್ ವರದಿಯಲ್ಲಿ ಉಲ್ಲೇಖಿಸಿದೆ.
ಸಾರ್ವಜನಿಕ ಸಾಲವನ್ನು ಕಡಿಮೆಗೊಳಿಸುವ ಪ್ರಯತ್ನಗಳ ಜೊತೆಗೆ ರಚನಾತ್ಮಕ ಮತ್ತು ಆರ್ಥಿಕ ಕ್ಷೇತ್ರ ಸುಧಾರಣೆಗಳ ಅನುಷ್ಠಾನವು ಆರ್ಥಿಕ ಬೆಳವಣಿಗೆಗೆ ಸಹಾಯಕವಾಗಲಿದೆ. ವಿತ್ತೀಯ ನೀತಿಯ ವಿಸ್ತರಣೆ, ಬಂಡವಾಳ ಹೂಡಿಕೆ, ಗ್ರಹಾಕರ ವೆಚ್ಚದಲ್ಲಿ ಏರಿಕೆ ಕಂಡುಬರುತ್ತಿದೆ. ಬ್ಯಾಂಕ್ಗಳ ಬಂಡವಾಳ ನೆರವು, ಜಿಎಸ್ಟಿಯಂತಹ ಸಾಂಸ್ಥಿಕ ಸುಧಾರಣೆ ಕ್ರಮಗಳಿಂದ ದೇಶಿ ಬೇಡಿಕೆ ಹೆಚ್ಚಾಗಲಿದೆ. ಹೀಗಾಗಿ, ಭಾರತ ಉತ್ತಮ ಪ್ರಗತಿ ಸಾಧಿಸಲಿದೆ ಎಂದು ಅಂದಾಜಿಸಿದೆ.
ಜಾಗತಿಕ ಆರ್ಥಿಕತೆ ಮಂದಗತಿಯ ಬೆಳವಣಿಗೆ ಕಾಣುತ್ತಿದ್ದು, ಅದು ಅಪಾಯದಲ್ಲಿದೆ. ಜಾಗತಿಕ ಆರ್ಥಿಕತೆಯ ಮೇಲೆ ಮೋಡ ಮುಸುಕುವ ಸಂಭವ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ತಯಾರಿಕ ಚಟುವಟಿಕೆಯ ಬೆಳವಣಿಗೆ ತಗ್ಗಿದೆ. ವಾಣಿಜ್ಯ ಸಮರ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಮುಖ ದೇಶಗಳ ಹಣಕಾಸು ಮಾರುಕಟ್ಟೆಯಲ್ಲಿನ ಒತ್ತಡದಿಂದಾಗಿ ಜಿಡಿಪಿ ನಿರೀಕ್ಷಿತ ಮಟ್ಟದ ಪ್ರಗತಿ ಕಾಣುತ್ತಿಲ್ಲ ಎಂದು ಐಎಂಎಫ್ ಜಾಗತಿಕ ಆರ್ಥಿಕತೆಯ ಕುರಿತು ವ್ಯಾಖ್ಯಾನಿಸಿದೆ.
ಚೀನಾದ ಆರ್ಥಿಕ ಬೆಳವಣಿಗೆ, ಹಣಕಾಸಿನ ಉತ್ತೇಜನ ಹೊರತಾಗಿಯೂ ಮಂದಗತಿಯಲ್ಲಿ ಸಾಗುತ್ತಿದೆ. 2018ರ ಸೆಪ್ಟೆಂಬರ್ ನಂತರ ಅಮೆರಿಕ ಸರಕುಗಳ ಮೇಲೆ ಸುಂಕ ಹೆಚ್ಚಳವು 2019 ಮತ್ತು 2020ರ ಜಿಡಿಪಿಯ ವಾರ್ಷಿಕ ಬೆಳವಣಿಗೆಯ ದರ ನಿಧಾನಗತಿಯಲ್ಲಿ ಸಾಗಲಿದೆ. ಅಮೆರಿಕದೊಂದಿಗೆ ವಾಣಿಜ್ಯ ಸಮರದ ಉದ್ವಿಗ್ನತೆಯು 2018ರ ದ್ವಿತೀಯಾರ್ಧದಲ್ಲಿ ಪರಿಣಾಮ ಬೀರಿದೆ ಎಂದು ಐಎಂಎಫ್ ವಿಶ್ಲೇಷಿಸಿದೆ.