ನವದೆಹಲಿ: ಭಾರತದ ವಾಯು, ನೌಕಾ ಹಾಗೂ ಭೂ ಸೇನಾ ಪಡೆಗಳಲ್ಲಿ ಅಧಿಕಾರಿ ಮತ್ತು ಯೋಧರ ಕೊರತೆ ಇದೆ ಎಂದು ಮೂಲಗಳು ತಿಳಿಸಿವೆ.
ಮೂರು ವಿಭಾಗದ ಸೇನಾ ಪಡೆಗಳಲ್ಲಿ ಪ್ರಸ್ತುತ 9,427 ಅಧಿಕಾರಿಗಳು ಹಾಗೂ 68,864 ಯೋಧರ ಅಭಾವವಿದೆ. 2019ರ ಜನವರಿವರೆಗೆ ಲಭ್ಯ ಮಾಹಿತಿ ಅನ್ವಯ, ಭೂಸೇನೆಯಲ್ಲಿ 7,399 ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. 2019ರ ಜೂನ್‌ವರೆಗೆ ನೌಕಾ ಪಡೆಯಲ್ಲಿ 1,545 ಅಧಿಕಾರಿಗಳ ಕೊರತೆ ಕಂಡು ಬಂದಿದ್ದರೇ ವಾಯುಪಡೆಯಲ್ಲಿ 483 ಅಧಿಕಾರಿಗಳು ಬೇಕಾಗಿದ್ದಾರೆ ಎಂದು ತಿಳಿದು ಬಂದಿದೆ.
ಆಫೀಸರ್ ಅಥವಾ ಏರ್‌ಮೆನ್ ಅಥವಾ ನಾವಿಕ ಶ್ರೇಣಿಗಿಂತಲೂ ಕಡಿಮೆ ಶ್ರೇಣಿಯ ಹುದ್ದೆಗಳನ್ನು ಗಮನಿಸಿದಲ್ಲಿ ಭೂಸೇನಾಪಡೆಗೆ ಒಟ್ಟು 12.23 ಲಕ್ಷ ಯೋಧರನ್ನು ಹೊಂದಲು ಅವಕಾಶವಿದೆ. ಸದ್ಯ11.85 ಲಕ್ಷ ಯೋಧರು ಮಾತ್ರವೇ ಇದ್ದಾರೆ. ಹೀಗಾಗಿ, 38,235 ಯೋಧರ ಕೊರತೆಯಿದೆ. ನೌಕಾಪಡೆಯಲ್ಲಿ 16,806 ಮತ್ತು ವಾಯುಪಡೆಯಲ್ಲಿ 13,823 ಯೋಧರ ಹುದ್ದೆಗಳು ಖಾಲಿ ಉಳಿದಿವೆ ಎಂದು ತಿಳಿದು ಬಂದಿದೆ.