ನವದೆಹಲಿ: 2024-25ರ ವೇಳೆಗೆ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ತಲುಪಬೇಕಾದರೆ ದೇಶದಲ್ಲಿ ಜಾಗತಿಕ ಮಟ್ಟದ ಬ್ಯಾಂಕ್ಗಳ ಅವಶ್ಯಕತೆ ಇದೆ ಎಂದು ಮುಖ್ಯ ಅರ್ಥಶಾಸ್ತ್ರ ಸಲಹೆಗಾರ ಕೆ ವಿ ಸುಬ್ರಮಣಿಯನ್ ಹೇಳಿದ್ದಾರೆ.
ಟಾಪ್-100 ಜಾಗತಿಕ ಬ್ಯಾಂಕ್ಗಳ ಪಟ್ಟಿಯಲ್ಲಿ ಭಾರತದ ಕೇವಲ ಒಂದು ಬ್ಯಾಂಕ್ ಇದೆ. 55ನೇ ಸ್ಥಾನದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಈ ಪಟ್ಟಿಯಲ್ಲಿರುವ ಭಾರತದ ಏಕೈಕ ಬ್ಯಾಂಕ್ ಆಗಿದೆ. ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ. ಭಾರತೀಯ ಬ್ಯಾಂಕಿಂಗ್ ಕ್ಷೇತ್ರವು ತನ್ನ ಆರ್ಥಿಕತೆಯ ಗಾತ್ರಕ್ಕೆ ಸಮನಾಗಿದ್ದಿದ್ದರೆ ಟಾಪ್ 100 ಜಾಗತಿಕ ಬ್ಯಾಂಕ್ಗಳ ಪಟ್ಟಿಯಲ್ಲಿ ಆರು ಬ್ಯಾಂಕ್ಗಳನ್ನು ಹೊಂದಿರುವ ದಕ್ಷಿಣ ಕೊರಿಯಾದ ಸ್ಥಾನದಲ್ಲಿ ಭಾರತ ಇರಬೇಕಿತ್ತು ಎಂದು ಸುಬ್ರಮಣಿಯನ್ ತಿಳಿಸಿದ್ದಾರೆ.
ಗಾತ್ರದಲ್ಲಿ ಭಾರತಕ್ಕಿದ್ದ ಅತಿ ಚಿಕ್ಕ ರಾಷ್ಟ್ರಗಳಾದ ಫಿನ್ಲ್ಯಾಂಡ್, ಡೆನ್ಮಾರ್ಕ್, ಬೆಲ್ಜಿಯಂ, ಆಸ್ಟ್ರಿಯಾ, ನಾರ್ವೆ, ಅಗ್ರ ನೂರರಲ್ಲಿ ಕನಿಷ್ಠ ಒಂದು ಬ್ಯಾಂಕನ್ನಾದರೂ ಹೊಂದಿವೆ. ಚೀನಾ 18 ಹಾಗೂ ಅಮೆರಿಕದ 12 ಬ್ಯಾಂಕ್ಗಳನ್ನು ಹೊಂದಿವೆ. ವಿದೇಶಿ ನೆಲದಲ್ಲಿ ಹೇಗೆ ಗೆಲ್ಲಬೇಕು ಎಂಬುದನ್ನು ದೇಶಕ್ಕೆ ತೋರಿಸಿದ ಕ್ರಿಕೆಟಿಗ ಎಂ ಎಸ್ ಧೋನಿಯಂತೆ, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯೂ ಜಾಗತಿಕ ಮಟ್ಟಕ್ಕೆ ಏರುವ ಅಗತ್ಯವಿದೆ ಎಂದು ಸುಬ್ರಮಣಿಯನ್ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಜಗತ್ತನ್ನು ಗೆಲ್ಲುವ ಅವಶ್ಯಕತೆಯಿದೆ. ಮನೆಯಲ್ಲಿ ಹುಲಿಯಾಗಿರುವ ಬದಲು ವಿಶ್ವ ಶ್ರೇಯಾಂಕದಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳಬೇಕು. ಚೀನಾ, ಅಮೆರಿಕವನ್ನ ಹಿಂದಿಕ್ಕಬೇಕು ಎಂದು ಸಿಇಎ ಹೇಳಿದ್ದಾರೆ.