ನ್ಯೂಯಾರ್ಕ್: 2005-06 ಮತ್ತು 2015-16ರ ನಡುವೆ ಸುಮಾರು 273 ಮಿಲಿಯನ್ (27.3 ಕೋಟಿ) ಭಾರತೀಯರು ಬಹು ಆಯಾಮದ ಬಡತನದಿಂದ ಹೊರಬಂದಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
ಭಾರತದ ಬಹುದೊಡ್ಡ ಸಂಖ್ಯೆಯ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಮತ್ತು ಆಕ್ಸ್‌ಫರ್ಡ್ ಪಾವರ್ಟಿ ಆ್ಯಂಡ್ ಹ್ಯೂಮನ್ ಡೆವಲಪ್‌ಮೆಂಟ್ ಇನಿಶಿಯೇಟಿವ್ನ (ಒಪಿಹೆಚ್‌ಐ) ಜಾಗತಿಕ ಬಡತನ ಸೂಚ್ಯಂಕದ ವರದಿ ತಿಳಿಸಿದೆ.
ಇದರಲ್ಲಿ 75 ದೇಶಗಳ ಪೈಕಿ 65 ದೇಶಗಳು 2000 ಮತ್ತು 2019ರ ನಡುವೆ ಬಹು ಆಯಾಮದ ಬಡತನದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಿವೆ ಎಂದು ತೋರಿಸುತ್ತದೆ.
ಕಳಪೆ ಆರೋಗ್ಯ, ಶಿಕ್ಷಣದ ಕೊರತೆ, ಅಸಮರ್ಪಕ ಜೀವನ ಮಟ್ಟ, ಕೆಲಸದ ಗುಣಮಟ್ಟ, ಹಿಂಸಾಚಾರದ ಬೆದರಿಕೆ ಮತ್ತು ಅಪಾಯಕಾರಿಯಾದ ಪ್ರದೇಶಗಳಲ್ಲಿ ವಾಸಿಸುವಂತಹ ಬಡವರು ತಮ್ಮ ದೈನಂದಿನ ಜೀವನದಲ್ಲಿ ಅನುಭವಿಸುವ ವಿವಿಧ ಅಭಾವಗಳು ಬಹುಆಯಾಮದ ಬಡತನ ವ್ಯಾಪ್ತಿಯೊಳಗೆ ಬರುತ್ತವೆ.
ಈ ಬಹುಆಯಾಮದ ಬಡತನ ಸೂಚ್ಯಂಕ (ಎಂಪಿಐ) ಮೌಲ್ಯವನ್ನು ಕಡಿಮೆ ಮಾಡಿದ 65 ದೇಶಗಳ ಪೈಕಿ 50 ರಾಷ್ಟ್ರಗಳು ಬಡತನದಲ್ಲಿ ವಾಸಿಸುವರ ಸಂಖ್ಯೆಯನ್ನು ತಗ್ಗಿಸಿವೆ. ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಬಹುದೊಡ್ಡ ಸಂಖ್ಯೆಯ ಸುಮಾರು 273 ಮಿಲಿಯನ್ ಜನರು ಈ ರೀತಿಯ ಬಡತನದಿಂದ ಹೊರಬಂದಿದ್ದಾರೆ ಎಂದು ವರದಿ ತಿಳಿಸಿದೆ.