ನ್ಯೂಯಾರ್ಕ್: ಒಟ್ಟು ದೇಶಿಯ ಉತ್ಪನ್ನದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಇಂಗ್ಲೆಂಡ್ ಮತ್ತು ಫ್ರಾನ್ಸ್ ಮೀರಿಸಿದ್ದು, ಇದು ಭಾರತ ಆರ್ಥಿಕ ಸ್ವಾತಂತ್ರ್ಯದ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಅಮೆರಿಕದ ಉನ್ನತ ಕಾಂಗ್ರೆಸ್ಸಿಗರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ರೆಪ್ರೆಸೆಂಟರ್ ಜೋ ವಿಲ್ಸನ್ ಅವರು ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ತಿಳಿಸಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಮಾತನಾಡಿದರು. ಕಳೆದ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಭಾರತವು ಒಟ್ಟು ದೇಶಿಯ ಉತ್ಪನ್ನದಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ಮೀರಿಸಿದೆ. ದುಃಖಕರ ಸಂಗತಿಯೆಂದರೇ ವುಹಾನ್ ವೈರಸ್ ಈ ಆರ್ಥಿಕ ಪ್ರಗತಿಯನ್ನು ಅಡ್ಡಿಪಡಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೊರೊನಾ ವೈರಸ್ ಸಾಂಕ್ರಾಮಿಕವು ಕಳೆದ ವರ್ಷ ಮಧ್ಯ ಚೀನಾದ ನಗರವಾದ ವುಹಾನ್‌ನಲ್ಲಿ ಹುಟ್ಟಿಕೊಂಡಿತು. ಸಮಾಜವಾದದಿಂದ ಮುಕ್ತ ಮಾರುಕಟ್ಟೆ ಆರ್ಥಿಕತೆಗೆ ತೆರೆದುಕೊಂಡು ಬಡತನದ ಪ್ರಮಾಣ ಕಡಿಮೆ ಮಾಡುವ ಭಾರತದ ವಿಕಾಸನವು ಆರ್ಥಿಕ ಸ್ವಾತಂತ್ರ್ಯದ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ವಿಲ್ಸನ್ ಬಣ್ಣಿಸಿದರು.
ಫೆಬ್ರವರಿಯಲ್ಲಿ ಅಮೆರಿಕ ಮೂಲದ ಥಿಂಕ್ ಟ್ಯಾಂಕ್ ವರ್ಲ್ಡ್ ಪಾಪ್ಯುಲೇಷನ್ ರಿವ್ಯೂ ಪ್ರಕಾರ, 2019ರಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ಅನ್ನು ಹಿಂದಿಕ್ಕುವ ಮೂಲಕ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿತು. ಕಳೆದ ವರ್ಷ ಸೆಪ್ಟೆಂಬರ್ 22ರಂದು ಹೂಸ್ಟನ್ನಲ್ಲಿ ಅಧ್ಯಕ್ಷರಾಗಿದ್ದಾಗ ಭಾರತ ಮತ್ತು ಅಮೆರಿಕದ ಮೈತ್ರಿ ಶ್ಲಾಘಿಸಿದರು.
ಉಭಯ ರಾಷ್ಟ್ರಗಳ ಸೇನಾ ಒಪ್ಪಂದದ ಮೂಲಕ ಮೋದಿ- ಟ್ರಂಪ್ ಜಂಟಿಯಾಗಿ ಹೆಜ್ಜೆ ಇರಿಸಿದ್ದರು. ಅಧ್ಯಕ್ಷ ಟ್ರಂಪ್ ಅವರು ಪೆಸಿಫಿಕ್ ಕಮಾಂಡ್ ಅನ್ನು ಇಂಡೋ - ಪೆಸಿಫಿಕ್ ಕಮಾಂಡ್ ಎಂದು ಮರು ನಾಮಕರಣ ಮಾಡಿ ಭಾರತ ಮತ್ತು ಅಮೆರಿಕದ ಮೈತ್ರಿ ಬಲವಾಗಿಸಿದರು. ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತ, ಹಳೆಯ ಪ್ರಜಾಪ್ರಭುತ್ವವಾದ ಅಮೆರಿಕ ಜತೆಗೆ ಮೈತ್ರಿ ಮಾಡಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಅಮೆರಿಕ ಮಿಲಿಟರಿಗೆ ಭಾರತದ ಪ್ರಾಮುಖ್ಯತೆ ಸೂಚಿಸುವ ಸಾಂಕೇತಿಕವಾಗಿ ಯುಎಸ್ ತನ್ನ ಹಳೆಯ ಮತ್ತು ಅತಿದೊಡ್ಡ ಮಿಲಿಟರಿ ಕಮಾಂಡ್ - ಪೆಸಿಫಿಕ್ ಕಮಾಂಡ್ ಅನ್ನು ಇಂಡೋ-ಪೆಸಿಫಿಕ್ ಕಮಾಂಡ್ ಎಂದು ಮರು ನಾಮಕರಣ ಮಾಡಿತು.
ಈ ತಿಂಗಳ ಆರಂಭದಲ್ಲಿ ವಿಲ್ಸನ್ ಅವರು ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಧ್ವಜಾರೋಹಣ ಸಮಾರಂಭಕ್ಕೆ ಅಟ್ಲಾಂಟಾದ ಭಾರತದ ಕಾನ್ಸುಲೇಟ್‌ನಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.