ನವದೆಹಲಿ: ಭಾರತ ಬಲವಾದ ಆರ್ಥಿಕ ಮೂಲಭೂತ ಅಂಶಗಳನ್ನು ಹೊಂದಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಚೀನಾದಿಂದ ಉತ್ಪಾದನಾ ನೆಲೆಗಳನ್ನು ಸ್ಥಳಾಂತರಿಸಲು ಉತ್ಸುಕರಾಗಿರುವ ಬಹುರಾಷ್ಟ್ರೀಯ ಕಂಪನಿಗಳನ್ನು ಆಕರ್ಷಿಸುವ ಸಾಧ್ಯತೆಯಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಭಾರತಕ್ಕೆ ಒಂದು ಮಹತ್ತರವಾದ ಅವಕಾಶವಿದೆ. ಆ ಅವಕಾಶಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ನಾವು ಪ್ರಯತ್ನಿಸಬೇಕಿದೆ. ಎಲ್ಲಾ ದೊಡ್ಡ ಕಂಪನಿಗಳು ಭಾರತಕ್ಕೆ ಬರಲು ಸ್ವಾಗತಾರ್ಹ. ದೇಶವು 150 ಮೊಬೈಲ್ ಫೋನ್ ಉತ್ಪಾದನಾ ಘಟಕಗಳನ್ನು ಹೊಂದಿದೆ ಎಂದರು.
ವೈಯಕ್ತಿಕ ರಕ್ಷಣಾ ಸಾಧನ ಮತ್ತು ವೆಂಟಿಲೇಟರ್‌ಗಳನ್ನು ಸಹ ದೇಶದೊಳಗೆ ತಯಾರಿಸಲಾಗುತ್ತಿದೆ. ಉತ್ತಮ ಸ್ಥೂಲ ಆರ್ಥಿಕ ಸೂಚಕಗಳೊಂದಿಗೆ ಭಾರತವು ಬೃಹತ್ ದೇಶಿಯ ಮಾರುಕಟ್ಟೆ ಹೊಂದಿದೆ ಎಂದು ಜಾವಡೇಕರ್ ಹೇಳಿದರು.
ಲಾಕ್‌ಡೌನ್ ಮುಗಿದ ನಂತರ ಎಲ್ಲಾ ಕೈಗಾರಿಕೆಗಳು ಆರಂಭವಾಗುತ್ತವೆ. ಭಾರತೀಯ ಆರ್ಥಿಕತೆಯ ಅಡಿಪಾಯ ಬಲವಾಗಿದ್ದು, ಸಾಕಷ್ಟು ಆಂತರಿಕ ಬೇಡಿಕೆಯಿದೆ. ವಲಸೆ ಕಾರ್ಮಿಕರಿಗಾಗಿ ಬಸ್ಸು ಮತ್ತು ರೈಲುಗಳ ವಿಶೇಷ ಓಡಾಟಕ್ಕೆ ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದೆ. ಲಾಕ್‌ಡೌನ್‌ನಿಂದಾಗಿ ಯಾವುದೇ ದೊಡ್ಡ ಮಟ್ಟದ ಉದ್ಯೋಗ ನಷ್ಟ ಆಗುವುದಿಲ್ಲ ಎಂದರು.