ವಾಷಿಂಗ್ಟನ್: ಕೊರೊನಾ ವೈರಸ್‌ನಿಂದಾಗಿ ಜಗತ್ತು ಪ್ರಸ್ತುತ ಎದುರಿಸುತ್ತಿರುವ ಅಸಾಧಾರಣ ಸವಾಲುಗಳಿಗೆ ಪ್ರತಿಕ್ರಿಯೆಗಳು ಸೇರಿದಂತೆ ಪ್ರಮುಖ ಬೆಳವಣಿಗೆ ಮತ್ತು ನೀತಿ- ನಿರೂಪಣೆ ರೂಪಿಸುವ ವಿಶ್ವದ 11 ಮಂದಿ ಆರ್ಥಿಕ ಚಿಂತಕರ ಸಾಲಿಗೆ ಆರ್ಬಿಐನ ಮಾಜಿ ಗರ್ವನರ್ ರಘುರಾಮ್ ರಾಜನ್ ಕೂಡ ಸ್ಥಾನ ಪಡೆದಿದ್ದಾರೆ.
ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಅವರು ರಘುರಾಮ್ ರಾಜನ್ ಸೇರಿದಂತೆ ಇತರ 11 ಮಂದಿಯ ಬಾಹ್ಯ ಸಲಹೆಗಾರರ ತಂಡ ರಚಿಸಿದ್ದಾರೆ. ಸೆಪ್ಟೆಂಬರ್ 2016 ರವರೆಗೆ ಮೂರು ವರ್ಷಗಳ ಕಾಲ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಆಗಿದ್ದ 57 ವರ್ಷದ ರಾಜನ್ ಪ್ರಸ್ತುತ ಚಿಕಾಗೊದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೋವಿಡ್-19 ಹರಡುವಿಕೆ ಮತ್ತು ಅದು ತಂದಿಟ್ಟ ನಾಟಕೀಯ ಬೆಳವಣಿಗೆಗಳು ಆರೋಗ್ಯ ಮತ್ತು ಆರ್ಥಿಕತೆಗೆ ಅಡ್ಡಿಯನ್ನುಂಟು ಮಾಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಸದಸ್ಯ ರಾಷ್ಟ್ರಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದವು. ಅವುಗಳ ಈಗ ಸಂಕೀರ್ಣ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಜಾರ್ಜೀವಾ ಹೇಳಿದರು.
ಉನ್ನತ ಮಟ್ಟದ ನೀತಿ- ನಿರೂಪಕರು, ಮಾರುಕಟ್ಟೆ ಮತ್ತು ಖಾಸಗಿ ವಲಯದ ಅನುಭವ ಹೊಂದಿರುವ ಶ್ರೇಷ್ಠ ವ್ಯಕ್ತಿಗಳ ಅಸಾಧಾರಣ ಮತ್ತು ವೈವಿಧ್ಯಮಯ ಗುಂಪು ಬಾಹ್ಯ ಸಲಹಾ ಗುಂಪಿನಲ್ಲಿ ಸೇವೆ ಸಲ್ಲಿಸಲು ಒಪ್ಪಿಕೊಂಡಿದ್ದಾರೆ. ಅವರ ಸೂಕ್ಷ್ಮ ಒಳನೋಟಗಳನ್ನು ಪಡೆಯಲು ಮತ್ತು ನಮ್ಮ ಆಲೋಚನೆ ಹಾಗೂ ವಿಧಾನಗಳಿಗೆ ಅನೌಪಚಾರಿಕ ಪ್ರತಿಕ್ರಿಯೆಗಳನ್ನು ಸ್ವೀಕರಿಸಲು ಇಂದು ಕ್ರಿಯಾತ್ಮಕವಾಗಿ ಚರ್ಚಿಸಿದ್ದೇವೆ ಐಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.
ಈ ಗುಂಪಿನ ಇತರ ಸದಸ್ಯರೆಂದರೆ ಸಿಂಗಾಪುರದ ಹಣಕಾಸು ಪ್ರಾಧಿಕಾರದ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ, ಮೆಸಾಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರೊಫೆಸರ್ ಕ್ರಿಸ್ಟಿನ್ ಫೋರ್ಬ್ಸ್, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಕೆವಿನ್ ರುಡ್, ವಿಶ್ವಸಂಸ್ಥೆಯ ಮಾಜಿ ಡೆಪ್ಯುಟಿ ಸೆಕ್ರೆಟರಿ ಲಾರ್ಡ್ ಮಾರ್ಕ್ ಮಲ್ಲೊಚ್ ಬ್ರೌನ್ ಹಾಗೂ ಇತರರು ಇದ್ದಾರೆ.