ನವದೆಹಲಿ : ಆದಾಯ ತೆರಿಗೆ ಅಧಿಕಾರಿಗಳು ನಿಗದಿತ ವಾಣಿಜ್ಯ ಬ್ಯಾಂಕ್ಗಳೊಂದಿಗೆ ಮಾಹಿತಿ ಹಂಚಿಕೊಳ್ಳಬಹುದು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ.
ಆದಾಯ ತೆರಿಗೆ ಅಧಿಕಾರಿಗಳಿಗೆ ತೆರಿಗೆದಾರರ ಮಾಹಿತಿಯನ್ನು ನಿಗದಿತ ಶೆಡ್ಯೂಲ್ಡ್ ಬ್ಯಾಂಕ್ ಜತೆಗೆ ಹಂಚಿಕೊಳ್ಳಲು ಅವಕಾಶ ನೀಡಲಾಗಿದೆ. ಇದು ಸಾಲದಾತರು ತಮ್ಮ ಗ್ರಾಹಕರಿಗೆ ವಿವಿಧ ಪಾವತಿಗಳ ಮೇಲೆ ಟಿಡಿಎಸ್ ಕಡಿತ ನಿರ್ಧರಿಸುವಲ್ಲಿನ ತೊಂದರೆಗಳನ್ನು ಸರಾಗಗೊಳಿಸುತ್ತದೆ ಎಂದಿದೆ.
ಆಗಸ್ಟ್ 31ರ ಅಧಿಸೂಚನೆಯಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ ಮಾಹಿತಿ ಹಂಚಿಕೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 138ರ ಅಡಿಯಲ್ಲಿ 1934ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಎರಡನೇ ವೇಳಾಪಟ್ಟಿಯಲ್ಲಿ ಪಟ್ಟಿ ಮಾಡಲಾದ 'ನಿಗದಿತ ವಾಣಿಜ್ಯ ಬ್ಯಾಂಕ್ಗಳನ್ನು' ಒಳಗೊಂಡಿದೆ ಎಂದು ತಿಳಿಸಿದೆ.
ವೈಯಕ್ತಿಕ ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಯ ಮೇಲೆ ವಿವಿಧ ಪಾವತಿಗಳ ಮೇಲಿನ ಮೂಲ (ಟಿಡಿಎಸ್) ಕಡಿತದ ತೆರಿಗೆ ನಿರ್ಧರಿಸುವಲ್ಲಿ ಬ್ಯಾಂಕ್ಗಳು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ತೆರಿಗೆ ಮಂಡಳಿಯ ಈ ನಿರ್ಧಾರದಿಂದ ಆ ತೊಂದರೆಗಳು ನಿವಾರಣೆ ಆಗಲಿವೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 138ರಡಿ ತನ್ನ ತೆರಿಗೆದಾರರ ಮಾಹಿತಿ ಅಥವಾ ವಿವರಗಳನ್ನು ಇತರ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳಲು ಆದಾಯ ತೆರಿಗೆ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ.
ಇತ್ತೀಚೆಗೆ ಇದೇ ರೀತಿಯ ಅಧಿಸೂಚನೆಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಭಾರತದ ಷೇರು ವಿನಿಮಯ ನಿಯಂತ್ರಣ ಮಂಡಳಿ ಮತ್ತು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ಇಂಟೆಲಿಜೆನ್ಸ್ ಬ್ಯೂರೋ ಇತರೆ ಏಜೆನ್ಸಿಗಳ ಜತೆ ಮಾಹಿತಿ ಹಂಚಿಕೊಳ್ಳಲು ಅನುಮತಿ ನೀಡಲಾಯಿತು.