ನವದೆಹಲಿ: ಜನವರಿಯಲ್ಲಿ ಜಿಎಸ್‌ಟಿ ಸಂಗ್ರಹವು ಸಾರ್ವಕಾಲಿಕ ಗರಿಷ್ಠ 1.20 ಲಕ್ಷ ಕೋಟಿ ರೂ.ಗೆ ಮುಟ್ಟಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಕಳೆದ ಐದು ತಿಂಗಳಲ್ಲಿ ಜಿಎಸ್‌ಟಿ ಆದಾಯದಲ್ಲಿ ಚೇತರಿಕೆಯ ಪ್ರವೃತ್ತಿಗೆ ಅನುಗುಣವಾಗಿ 2021ರ ಜನವರಿ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳಿಗಿಂತ ಶೇ. 8ರಷ್ಟು ಹೆಚ್ಚಾಗಿದೆ.
2021ರ ಜನವರಿ ತಿಂಗಳಲ್ಲಿ 2021ರ ಜ. 31ರ ತನಕ ಸಂಜೆ 6 ಗಂಟೆವರೆಗೆ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 1,19,847 ಕೋಟಿ ರೂ.. ಇದರಲ್ಲಿ ಸಿಜಿಎಸ್ಟಿ ಪಾಲು 21,923 ಕೋಟಿ ರೂ., ಎಸ್ಜಿಎಸ್ಸಿ 29,014 ಕೋಟಿ ರೂ., ಐಜಿಎಸ್ಟಿ 60,288 ಕೋಟಿ ರೂ. (27,424 ಕೋಟಿ ರೂ. ಸರಕು ಆಮದು) ಮತ್ತು ಸೆಸ್ 8,622 ಕೋಟಿ ರೂ. (ಸರಕುಗಳ ಆಮದು 883 ಕೋಟಿ ರೂ. ಸೇರಿ) ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕೇಂದ್ರ ಬಜೆಟ್: ವರ್ಕ್ ಫ್ರಂ ಹೋಮ್, ವೇತನ, ಆದಾಯ ತೆರಿಗೆದಾರರಿಗೆ ಭಾರೀ ಕೊಡುಗೆ ನಿರೀಕ್ಷೆ
2019-20ರ ಆರ್ಥಿಕ ವರ್ಷದ 12 ತಿಂಗಳಲ್ಲಿ ಒಂಭತ್ತರಲ್ಲಿ ಜಿಎಸ್‌ಟಿ ಆದಾಯವು ಒಂದು ಲಕ್ಷ ಕೋಟಿ ರೂ. ದಾಟಿದೆ. ಆದರೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಆದಾಯವು ಕ್ಷೀಣಿಸಿದೆ.
ಏಪ್ರಿಲ್‌ನಲ್ಲಿ ಆದಾಯ 32,172 ಕೋಟಿ ರೂ., ನಂತರ ಮೇ ತಿಂಗಳಲ್ಲಿ 62,151 ಕೋಟಿ ರೂ., ಜೂನ್‌ನಲ್ಲಿ 90,917 ಕೋಟಿ ರೂ., ಜುಲೈನಲ್ಲಿ 87,422 ಕೋಟಿ ರೂ., ಆಗಸ್ಟ್‌ನಲ್ಲಿ 86,449 ಕೋಟಿ ರೂ. ಸೆಪ್ಟೆಂಬರ್‌ನಲ್ಲಿ 95,480 ಕೋಟಿ ರೂ., ಅಕ್ಟೋಬರ್‌ನಲ್ಲಿ 1,05,155 ಕೋಟಿ, ನವೆಂಬರ್‌ನಲ್ಲಿ 1,04,963 ಕೋಟಿ ರೂ. ಮತ್ತು ಡಿಸೆಂಬರ್‌ನಲ್ಲಿ 1,15,174 ಕೋಟಿ ರೂ.ನಷ್ಟು ಸಂಗ್ರಹವಾಗಿದೆ.