ನವದೆಹಲಿ: ಡಿಸೆಂಬರ್ ತಿಂಗಳ ಸರಕು ಮತ್ತು ಸೇವಾ ತೆರಿಗೆಯು (ಜಿಎಸ್ಟಿ) ಕಳೆದ ವರ್ಷಕ್ಕಿಂತ ಶೇ 8.92ರಷ್ಟು ಏರಿಕೆಯಾಗಿದೆ. ಆದರೆ, ನಿರೀಕ್ಷಿತ ಮಾಸಿಕ ಸರಾಸರಿಯಲ್ಲಿ ಮಾತ್ರ ಅಲ್ಪ ಇಳಿಕೆ ಕಂಡುಬಂದಿದೆ.
2018ರ ಡಿಸೆಂಬರ್ ತಿಂಗಳಲ್ಲಿ ಸಿಎಸ್ಟಿ ಸಂಗ್ರಹದ ಪ್ರಮಾಣ ₹ 94,726 ಕೋಟಿಯಷ್ಟಿತ್ತು. ಅದು 2019ರ ಇದೇ ತಿಂಗಳಲ್ಲಿ 1.03 ಲಕ್ಷ ಕೋಟಿಯಷ್ಟು ಆದಾಯ ಹರಿದು ಬಂದಿದೆ. ಆದರೆ, ನಿರೀಕ್ಷಿತ ಮಟ್ಟವಾದ ಮಾಸಿಕ 1.10 ಲಕ್ಷ ಕೋಟಿ ರೂ. ತಲುಪಲು ಅಲ್ಪ ಹಿನ್ನಡೆಯಾಗಿದೆ.
ವಾರ್ಷಿಕ ಜಿಎಸ್ಟಿ ಸಂಗ್ರಹದಲ್ಲಿ ಕಡಿಮೆಯಾಗುತ್ತಿದೆ ಎಂಬ ಆಪಾದನೆಯ ಮಧ್ಯಯೂ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಆದಾಯದ ಮೊತ್ತವು ನೂರರ ಗಡಿ ದಾಟಿದ್ದು, ಆಶಾದಾಯಕ ಬೆಳವಣಿಗೆಯಾಗಿದೆ.
ಡಿಸೆಂಬರ್‌ನಲ್ಲಿ ಒಟ್ಟು 1,03,184 ಕೋಟಿ ರೂ. ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್ಟಿ ಪಾಲು ₹ 19,952 ಕೋಟಿ ಮತ್ತು ರಾಜ್ಯಗಳ ಜಿಎಸ್ಟಿ ₹ 26,792 ಕೋಟಿಯಷ್ಟಿದೆ. ಐಜಿಎಸ್ಟಿ ₹ 48,099 ಕೋಟಿ ಹಾಗೂ (ಆಮದು ಸುಂಕ ₹ 21,295) ಹಾಗೂ ಸೆಸ್ ₹ 8,331 ಕೋಟಿಯಷ್ಟು ( ಆಮದು ಮೇಲಿನ ಸುಂಕ ₹ 847 ಕೋಟಿ) ಇದೆ. ಉಳಿದಂತೆ ಜಿಎಸ್ಟಿಆರ್ 3ಬಿ ರಿಟರ್ನ್ಸ್ ಮೊತ್ತ 81.21 ಲಕ್ಷ ರೂ.ಯಷ್ಟಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ದೇಶೀಯ ವಹಿವಾಟಿನಿಂದ 2019ರ ಡಿಸೆಂಬರ್ ತಿಂಗಳಲ್ಲಿ ಜಿಎಸ್ಟಿ ಆದಾಯವು 2018ರ ಡಿಸೆಂಬರ್ ತಿಂಗಳಲ್ಲಿ ಸಂಗ್ರಹಿಸಿದ ಆದಾಯಕ್ಕಿಂತ ಶೇ 6ರಷ್ಟು ಬೆಳವಣಿಗೆಯಾಗಿದೆ. ಆಮದುಗಳಿಂದ ಸಂಗ್ರಹಿಸಲಾದ ಐಜಿಎಸ್ಟಿ ಮೊತ್ತ ಪರಿಗಣಿಸಿದರೆ, ಡಿಸೆಂಬರ್ 2019ರ ಒಟ್ಟು ಆದಾಯವು 2018ರ ಡಿಸೆಂಬರ್‌ನಲ್ಲಿ ಸಂಗ್ರಹಿಸಿದ ಆದಾಯಕ್ಕೆ ಹೋಲಿಸಿದರೆ ಶೇ 9ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಿದೆ.