ನವದೆಹಲಿ: ಒಂದು ದೇಶ ಒಂದು ತೆರಿಗೆ ನೀತಿ ಜಾರಿಯ ಬಳಿಕ ಇದೇ ಪ್ರಥಮ ಬಾರಿಗೆ ಕೇಂದ್ರದ ಖಜಾನೆಗೆ ದಾಖಲೆಯ ಪ್ರಮಾಣದಲ್ಲಿ ಜಿಎಸ್‌ಟಿ ಹರಿದುಬಂದಿದೆ.
2020ರ ಡಿಸೆಂಬರ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯವು 1,15,174 ಕೋಟಿ ರೂ.ಗೆ ಏರಿದೆ. ಇದು ಹೊಸ ತೆರಿಗೆ ನಿಯಮ ಜಾರಿಗೆ ಬಂದಾಗಿನಿಂದ ಸಾರ್ವಕಾಲಿಕ ಮಾಸಿಕ ಗರಿಷ್ಠವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಜಿಎಸ್‌ಟಿ ಆದಾಯದಲ್ಲಿ ಶೇ 12ರಷ್ಟು ಹೆಚ್ಚಳವಾಗಿದ್ದು, ಡಿಸೆಂಬರ್ನಲ್ಲಿನ ಅಂಕಿಅಂಶಗಳು ಜಿಎಸ್‌ಟಿ ಆದಾಯದಲ್ಲಿ ಇತ್ತೀಚಿನ ಚೇತರಿಕೆಯ ಪ್ರವೃತ್ತಿಗೆ ಕೈಗನ್ನಡಿಯಾಗಿವೆ ಎಂದು ಸಚಿವಾಲಯ ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಸತತ ಮೂರನೇ ತಿಂಗಳು ಜಿಎಸ್‌ಟಿ ಆದಾಯ ₹ 1 ಲಕ್ಷ ಕೋಟಿಗಿಂತ ಹೆಚ್ಚಾಗಿದೆ. ಡಿಸೆಂಬರ್ 2020ರ ಆದಾಯವು ಕಳೆದ ತಿಂಗಳ ಆದಾಯದ 1,04.963 ಕೋಟಿ ರೂ.ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ದರ ಏರಿಕೆಯ ಬರೆ: ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ!
2020ರ ಡಿಸೆಂಬರ್‌ನಲ್ಲಿ ಜಿಎಸ್‌ಟಿ ಆದಾಯ ಜಿಎಸ್‌ಟಿ ಜಾರಿಗೆ ಬಂದ ನಂತರ ಅತಿ ಹೆಚ್ಚು ಮತ್ತು ಇದು ಮೊದಲ ಬಾರಿಗೆ ₹ 1.15 ಲಕ್ಷ ಕೋಟಿ ದಾಟಿದೆ. ಇದುವರೆಗಿನ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹವು 2019ರ ಏಪ್ರಿಲ್ ತಿಂಗಳಲ್ಲಿ 1,13,866 ಕೋಟಿ. ರೂ ಬಂದಿತ್ತು.
ಏಪ್ರಿಲ್‌ನ ಆದಾಯವು ಸಾಮಾನ್ಯವಾಗಿ ಮಾರ್ಚ್‌ನ ಆದಾಯಕ್ಕೆ ಸಂಬಂಧಿಸಿರುವುದರಿಂದ ತುಸು ಹೆಚ್ಚಿನದಾಗಿರುತ್ತದೆ. ಇದು ಹಣಕಾಸು ವರ್ಷದ ಅಂತ್ಯವನ್ನು ಸೂಚಿಸುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಡಿಸೆಂಬರ್‌ನಲ್ಲಿ ಬಂದ 1,15,174 ಕೋಟಿ ರೂ. ಜಿಎಸ್‌ಟಿ ಆದಾಯದಲ್ಲಿ ಸಿಜಿಎಸ್‌ಟಿ ಪಾಲು ₹ 21,365 ಕೋಟಿ, ಎಸ್‌ಜಿಎಸ್‌ಟಿ ₹ 27,804 ಕೋಟಿ, ಐಜಿಎಸ್‌ಟಿ ₹ 57,426 ಕೋಟಿ (ಸರಕುಗಳ ಆಮದು ಸಂಗ್ರಹ ₹ 27,050 ಕೋಟಿ ಸೇರಿ) ಮತ್ತು ಸೆಸ್ 8,579 ಕೋಟಿ ರೂ. (ಸರಕುಗಳ ಆಮದು ಸಂಗ್ರಹ ₹ 971 ಕೋಟಿ ಸೇರಿ) ಒಳಗೊಂಡಿದೆ. 2020ರ ಡಿಸೆಂಬರ್ 31 ರವರೆಗೆ ನವೆಂಬರ್ ತಿಂಗಳಿಗೆ ಸಲ್ಲಿಸಲಾದ ಒಟ್ಟು ಜಿಎಸ್‌ಟಿಆರ್ -3 ಬಿ ರಿಟರ್ನ್ಸ್ ಸಂಖ್ಯೆ 87 ಲಕ್ಷ ಎಂದು ಸಚಿವಾಲಯ ತಿಳಿಸಿದೆ.