ನವದೆಹಲಿ: ಭ್ರಷ್ಟಾಚಾರ ಮತ್ತು ಇತರ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ 21 ತೆರಿಗೆ ಅಧಿಕಾರಿಗಳಿಗೆ ಕಡ್ಡಾಯವಾಗಿ ನಿವೃತ್ತಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.
ಭ್ರಷ್ಟಾಚಾರ ಮತ್ತು ಈ ಸಂಬಂಧಿತ ಇತರ ಆರೋಪಗಳು ಹಾಗೂ ಸಿಬಿಐ ದಾಳಿಯ ಕಾರಣ, ಸಾರ್ವಜನಿಕ ಹಿತದೃಷ್ಟಿಯಿಂದ ಮೂಲಭೂತ ನಿಯಮ 56(ಜೆ) ಅಡಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಗ್ರೂಪ್ ಬಿ ವೃಂದದ 21 ಅಧಿಕಾರಿಗಳಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಕಡ್ಡಾಯ ನಿವೃತ್ತಿ ನೀಡಿ ಮನೆಗೆ ಕಳುಹಿಸಿದೆ.
ಈ ಮೂಲಕ ಭ್ರಷ್ಟ ತೆರಿಗೆ ಅಧಿಕಾರಿಗಳ ನಿಗ್ರಹದಲ್ಲಿ ಕಳೆದ ಜೂನ್ನಿಂದ ನಡೆಯುತ್ತಿರುವ 5ನೇ ತಂಡಕ್ಕೆ ಕಡ್ಡಾಯವಾಗಿ ನಿವೃತ್ತಿ ನೀಡಲಾಗಿದೆ. 85 ಅಧಿಕಾರಿ ವೃಂದದಲ್ಲಿ 64 ಉನ್ನತ ಶ್ರೇಣಿಯ ತೆರಿಗೆ ಅಧಿಕಾರಿಗಳನ್ನು ಈಗಾಗಲೇ ವಜಾಗೊಳಿಸಲಾಗಿದೆ. ಇದ್ರಲ್ಲಿ ಸಿಬಿಡಿಟಿಯ 12 ಉನ್ನತ ಅಧಿಕಾರಿಗಳೂ ಸೇರಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸಿಬಿಡಿಟಿಯ 15 ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿತ್ತು. ಇತ್ತೀಚೆಗೆ ಕಡ್ಡಾಯ ನಿವೃತ್ತಿ ಪಡೆದವರು ಹೈದರಾಬಾದ್, ವಿಶಾಖಪಟ್ಟಣಂ, ರಾಜಮಂಡ್ರಿ, ಹಝರಿಬಾಗ್, ನಾಗ್ಪುರ್, ರಾಜಕೋಟ್, ಜೋದ್ಪುರ್, ಬಿಕನೇರ್, ಭೋಪಾಲ್ ಮತ್ತು ಇಂದೋರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.