ನವದೆಹಲಿ : ದೇಶೀಯ ಉತ್ಪಾದನೆ ಮತ್ತು ರಫ್ತು ಉತ್ತೇಜಿಸಲು ಪೀಠೋಪಕರಣಗಳ ಕಚ್ಚಾ ವಸ್ತುಗಳು, ತಾಮ್ರ ತುಣುಕು, ಆಯ್ದ ರಾಸಾಯನಿಕಗಳು, ಟೆಲಿಕಾಂ ಉಪಕರಣಗಳು, ರಬ್ಬರ್ ಉತ್ಪನ್ನಗಳು ಸೇರಿ ಹಲವು ಸರಕುಗಳ ಮೇಲೆ ಮುಂದಿನ ವಾರ ಕೇಂದ್ರ ಸರ್ಕಾರ ಮಂಡನೆ ಮಾಡಲಿರುವ ಬಜೆಟ್‌ನಲ್ಲಿ ಕಸ್ಟಮ್ಸ್ ಸುಂಕ ಬದಲಾಯಿಸಬಹುದು ಎಂದು ಮೂಲಗಳು ತಿಳಿಸಿವೆ.
ಕತ್ತರಿಸಿದ ಮತ್ತು ಫಾಲಿಶ್ ವಜ್ರಗಳು, ರಬ್ಬರ್ ಸರಕುಗಳು, ಚರ್ಮದ ಉಡುಪುಗಳು, ಟೆಲಿಕಾಂ ಉಪಕರಣಗಳು ಮತ್ತು ಕಾರ್ಪೆಟ್ ಸೇರಿ 20ಕ್ಕೂ ಅಧಿಕ ಉತ್ಪನ್ನಗಳ ಮೇಲೆ ಆಮದು ಸುಂಕ ಬದಲಾಗಬಹುದು. ಪೀಠೋಪಕರಣ ತಯಾರಿಕೆಯಲ್ಲಿ ಬಳಸುವ (ಒರಟು, ಸಾನ್ ಮರ ಮತ್ತು ಹಾರ್ಡ್ ಬೋರ್ಡ್) ಆಯ್ದ ಕಚ್ಚಾ ವಸ್ತುಗಳ ಮೇಲೆ ಕಸ್ಟಮ್ಸ್ ಸುಂಕವನ್ನು ತೆಗೆದುಹಾಕಬಹುದು. ತಾಮ್ರ ಸಾಂದ್ರತೆಗೆ ಬಳಸುವ ಸರಕುಗಳು ಸೇರಿವೆ ಎಂದರು.
ದುಬಾರಿ ಕಚ್ಚಾ ವಸ್ತುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಬೆಲೆ ಸ್ಪರ್ಧಾತ್ಮಕತೆ ಪರಿಣಾಮ ಬೀರುತ್ತವೆ. ದೇಶದ ಪೀಠೋಪಕರಣಗಳ ರಫ್ತು ಪ್ರಮಾಣ ತೀರಾ ಕಡಿಮೆ (ಶೇ.1ರಷ್ಟು) ಇದೆ. ಆದರೆ, ಚೀನಾ ಮತ್ತು ವಿಯೆಟ್ನಾಂನಂತಹ ದೇಶಗಳು ಈ ವಲಯದಲ್ಲಿ ಪ್ರಾಬಲ್ಯ ಸಾಧಿಸಿವೆ ಎಂದು ಹೇಳಿದರು.
ಕಲ್ಲಿದ್ದಲು ಟಾರ್ ಪಿಚ್ (ಘನಿಕೃತ ಡಾಂಬರ್) ಮತ್ತು ತಾಮ್ರ ತುಣುಕು ಮೇಲಿನ ಕಸ್ಟಮ್ಸ್ ಸುಂಕ ತಗ್ಗಿಸಲು ಸರ್ಕಾರ ಪರಿಗಣಿಸಬಹುದು. ಆದರೆ, ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಮತ್ತು ಬಟ್ಟೆ ಡ್ರೈಯರ್ನಂತಹ ಕೆಲವು ಸಿದ್ಧಪಡಿಸಿದ ಸರಕುಗಳ ಮೇಲಿನ ಸುಂಕ ಹೆಚ್ಚಳವಾಗಲಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬೆಳಗ್ಗೆ ಗೂಳಿ ಆರ್ಭಟ, ಸಂಜೆಗೆ ಕರಡಿ ಕುಣಿತ: ಹೂಡಿಕೆದಾರರಿಗೆ ಪೀಕಲಾಟ
ಏರ್ಕಂಡಿಷನ್ ಮತ್ತು ಎಲ್ಇಡಿ ದೀಪಗಳು ಸೇರಿದಂತೆ ಹಲವು ಕ್ಷೇತ್ರಗಳಿಗೆ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ ಯೋಜನೆ (ಪಿಎಲ್ಐ) ಪರಿಚಯಿಸುವಂತಹ ದೇಶೀಯ ಉತ್ಪಾದನೆ ಹೆಚ್ಚಿಸಲು ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸಹಜವಾಗಿ ಆಮದು ಸರಕುಗಳ ಸುಂಕ ಹೆಚ್ಚಳವಾಗಲಿದೆ. ಇದರಿಂದ ಅವುಗಳ ದರ ಸಹ ಏರಿಕೆಯಾಗಲಿವೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು 2021-22ರ ಬಜೆಟ್ ಮಂಡಿಸಲಿದ್ದಾರೆ. ಈ ಸರಕುಗಳ ಮೇಲಿನ ಕಸ್ಟಮ್ಸ್ ಸುಂಕ ಬದಲಾಯಿಸುವುದು ಸ್ವಾವಲಂಬಿ ಭಾರತ ಅಭಿಯಾನ ಉತ್ತೇಜಿಸುವುದಾಗಿದೆ. ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಕಳೆದ ವರ್ಷ ಪೀಠೋಪಕರಣಗಳು, ಆಟಿಕೆಗಳು ಮತ್ತು ಪಾದರಕ್ಷೆಗಳಂತಹ ಹಲವು ಉತ್ಪನ್ನಗಳ ಮೇಲೆ ಸರ್ಕಾರವು ಆಮದು ತೆರಿಗೆ ಹೆಚ್ಚಿಸಿತ್ತು.