ನವದೆಹಲಿ: ಕೇಂದ್ರ ಸರ್ಕಾರವು ಬಜೆಟ್ ಅಧಿವೇಶನದಲ್ಲಿ ಎಲ್ಲ ವಿಧದ ಚರ್ಚೆಗಳಿಗೆ ಮುಕ್ತ ಅವಕಾಶ ನೀಡುತ್ತದೆ ಮತ್ತು ಸಂಸದರ ತಮ್ಮ ಬೇಡಿಕೆಗಳ ಜತೆಗೆ ಪ್ರಸ್ತುತ ಆರ್ಥಿಕ ಸ್ಥಿಗತಿಯ ಬಗ್ಗೆಯೂ ಆ ವೇಳೆಯಲ್ಲಿ ಚರ್ಚಿಸಬಹುದು ಎಂದು ಪ್ರಧಾನಿ ನರೇಂದ್ರ ಹೇಳಿದ್ದಾರೆ.
ಶನಿವಾರ ಮಂಡನೆ ಆಗಲಿರುವ 2020ರ ಕೇಂದ್ರ ಬಜೆಟ್ ಪೂರ್ವಭಾವಿಯಾಗಿ ಗುರುವಾರ ಸರ್ವಪಕ್ಷಗಳ ಮುಖಂಡರ ಸಭೆ ಕರೆದಿದ್ದರು. ಪ್ರಧಾನಿ ಮೋದಿ, ಹಿರಿಯ ಸಚಿವರುಗಳಾದ ಆನಂದ್ ಶರ್ಮಾ, ರಾಜನಾಥ್ ಸಿಂಗ್, ಪ್ರಹ್ಲಾದ್ ಜೋಶಿ ಮತ್ತು ಕಾಂಗ್ರೆಸ್ನ ಗುಲಾಮ್ ನಬಿ ಆಜಾದ್, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಇತರ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಬಹುತೇಕ ಸದಸ್ಯರು ದೇಶದ ಹಿತಚಿಂತನೆ ಬಯಸಿ ಪ್ರಸ್ತುತ ಆರ್ಥಿಕ ಸ್ಥಿತಿಗತಿಯ ಬಗ್ಗೆ ಚರ್ಚಿಸಬೇಕೆಂದು ಕೇಳಿಕೊಂಡಿದ್ದಾರೆ. ನಾನು ಇದನ್ನು ಸ್ವಾಗತಿಸುತ್ತೇನೆ. ನಮಗೆ ನಿಮ್ಮ ಸಲಹೆಗಳು ಬೇಕು ಮತ್ತು ನಿಮ್ಮೆಲ್ಲರ ಸಲಹೆಯಂತೆ ನಾವು ಅಗತ್ಯವಾಗಿ ಆರ್ಥಿಕ ವಿದ್ಯಮಾನಗಳ ಕುರಿತು ಚರ್ಚಿಸಬೇಕಿದೆ ಎಂದರು.
ಭಾರತ ಜಾಗತಿಕ ಸಮುದಾಯದ ಆಕರ್ಷಣ ತಾಣವಾಗಲು ಏನೆಲ್ಲ ಮಾಡಲು ಸಾಧ್ಯ ಎಂಬುದರತ್ತ ನಾವೆಲ್ಲರೂ ಗಮನಹರಿಸಬೇಕಿದೆ. ಈ ಬಜೆಟ್ನಲ್ಲಿ, ಹೊಸ ವರ್ಷದ ಆರಂಭದಲ್ಲಿ ನಾವು ದೇಶದ ಆರ್ಥಿಕತೆಯನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕಿದೆ ಎಂದು ಮೋದಿ ಹೇಳಿದರು.