ನವದೆಹಲಿ: ಉದ್ಯಮಿಗಳು, ಸ್ಟಾರ್ಟ್ಅಪ್, ಕೃಷಿ ತಂತ್ರಜ್ಞಾನ ಹೂಡಿಕೆಗಳು, ಲಾಜಿಸ್ಟಿಕ್ಸ್ ಹಾಗೂ ಕೃಷಿ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಲು ಕೃಷಿ ಮೂಲಸೌಕರ್ಯ ನಿಧಿಗೆ 1 ಲಕ್ಷ ಕೋಟಿ ರೂ. ನೀಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೃಷಿ ಮೂಲಸೌಕರ್ಯ ನಿಧಿಯು ಕೋವಿಡ್-19 ಬಿಕ್ಕಟ್ಟು ಎದುರಿಸಲು ಘೋಷಿಸಲಾದ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ನ ಭಾಗವಾಗಿದೆ.
ಕ್ಯಾಬಿನೆಟ್ ನಿರ್ಧಾರಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, ಇದು ಕೃಷಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲಿದೆ. ಪ್ರಾಥಮಿಕ ಕೃಷಿ ಸಾಲ ಸಂಘಗಳು, ರೈತ ಸಂಘಟನೆಗಳು, ಕೃಷಿ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ), ಕೃಷಿ ಉದ್ಯಮಿಗಳು, ಸ್ಟಾರ್ಟ್ಅಪ್ ಮತ್ತು ಕೃಷಿ ತಂತ್ರಜ್ಞಾನದ ಉದ್ಯಮಿಗಳಿಗೆ 1 ಲಕ್ಷ ಕೋಟಿ ರೂ. ಆರ್ಥಿಕ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.