ಪಣಜಿ: ಕಳೆದ ತಿಂಗಳು ನಡೆದ ಎರಡು ದಿನಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಸಭೆಗೆ ಗೋವಾ ರಾಜ್ಯ ಸರ್ಕಾರ ಬರೋಬ್ಬರಿ ₹ 3.26 ಕೋಟಿ ಖರ್ಚು ಮಾಡಿದೆ.
ಇಲ್ಲಿನ ವಕೀಲರಾದ ಐರೀಸ್ ರೋಡ್ರಿಗಸ್ ಎಂಬುವರು ಸಲ್ಲಿಸಿದ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿ ಕೋರಲಾದ ಅರ್ಜಿಗೆ ವಾಣಿಜ್ಯ ತೆರಿಗೆ ಇಲಾಖೆ ಈ ಮಾಹಿತಿ ನೀಡಿದ್ದು, ಸರ್ಕಾರದ ದುಂದು ವೆಚ್ಚ ಬಹಿರಂಗವಾಗಿದೆ. ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದೊಂದಿಗೆ (ಜಿಟಿಡಿಸಿ) ಸಹಭಾಗಿತ್ವದಲ್ಲಿ ವಾಸ್ಕೋ ಮೂಲದ ಕಂಪನಿ, ಜಿಎಸ್ಟಿ ಮಂಡಳಿ ಸಭೆ, ಜಾಹೀರಾತು, ಹೋರ್ಡಿಂಗ್ಗಳು ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಭಾವಚಿತ್ರಗಳನ್ನು ಜಾಹೀರಾತಿನಲ್ಲಿ ಲಗತ್ತಿಸಲು ಸುಮಾರು 1.95 ಕೋಟಿ ರೂ. ಮೊತ್ತದ ಬಿಲ್ ನೀಡಿತ್ತು.
ಜಿಎಸ್ಟಿ ಸಭೆ ನಡೆದ ಡಬಲ್ ಟ್ರೀ ರೆಸಾರ್ಟ್ನಲ್ಲಿನ ವಸತಿ, ಆಹಾರಕ್ಕೆ ₹ 50 ಲಕ್ಷ ವೆಚ್ಚವಾಗಿದೆ. ಇದಲ್ಲದೆ ಸರ್ಕಾರ ಗಣ್ಯರ ವಸತಿಗಾಗಿ ಹೆಚ್ಚುವರಿಯಾಗಿ ₹ 30 ಲಕ್ಷ ವ್ಯಯಿಸಿದೆ ಎಂದು ಇಲಾಖೆ ಮಾಹಿತಿ ನೀಡಿದೆ.