ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ 2021-22ರ ಆರ್ಥಿಕ ಸಮೀಕ್ಷಾ ವರದಿಯನ್ನು ಬಜೆಟ್ ಅಧಿವೇಶನದ ಮೊದಲ ದಿನದ ಕಲಾಪದಲ್ಲಿಂದು ಮಂಡಿಸಿದರು. 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ (ಏಪ್ರಿಲ್ 2022 ರಿಂದ ಮಾರ್ಚ್ 2023ರವರೆಗೆ) ಶೇ.8 ರಿಂದ 8.5 ರಷ್ಟು ಬೆಳವಣಿಗೆಯ ದರ ಅಂದಾಜಿಸಲಾಗಿದೆ. ಒಟ್ಟು ದೇಶೀಯ ಉತ್ಪನ್ನ-ಜಿಡಿಪಿ ಶೇ.9.2ಕ್ಕೆ ಏರಿಕೆಯಾಗಲಿದೆ ಎಂದು ರಾಷ್ಟ್ರೀಯ ಅಂಕಿ- ಅಂಶ ಕಚೇರಿ-ಎನ್‌ಎಸ್‌ಒ ಅಂದಾಜು ಮಾಡಿದೆ.
ಆರ್ಥಿಕ ಸಮೀಕ್ಷೆ 2021-22ರ ಸಮೀಕ್ಷೆಯಲ್ಲಿ ಆರ್ಥಿಕತೆಯ ವಿವಿಧ ವಲಯಗಳ ಸ್ಥಿತಿ ಮತ್ತು ಬೆಳವಣಿಗೆಯನ್ನು ವೇಗಗೊಳಿಸಲು ಕೈಗೊಳ್ಳಬೇಕಾದ ಸುಧಾರಣೆಗಳನ್ನು ವಿವರಿಸಲಾಗಿದೆ. 2020-21ರಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ.7.3 ರಷ್ಟು ಸಂಕುಚಿತಗೊಂಡಿದೆ. ಸಮೀಕ್ಷೆಯು ಭಾರತದ ಆರ್ಥಿಕತೆಯ ಸ್ಥಿತಿ ಸುಧಾರಿಸಲು ಪೂರೈಕೆ - ಭಾಗದ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದೆ.
ಆರ್ಥಿಕ ಸಮೀಕ್ಷಾ ವರದಿ ಮಂಡನೆ ಬಳಿಕ ಲೋಕಸಭೆ ಕಲಾಪವನ್ನು ನಾಳೆಗೆ 11 ಗಂಟೆಗೆ ಮುಂದೂಡಲಾಗಿದೆ. ಈಗ ರಾಜ್ಯಸಭೆಯಲ್ಲಿ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಪ್ರಾರಂಭವಾಗಿದೆ.
ಸಂಸತ್ತಿನ ಕೇಂದ್ರ ಬಜೆಟ್ ಅಧಿವೇಶನದ ಮೊದಲ ಭಾಗವು ಜನವರಿ 31 ರಿಂದ ಫೆಬ್ರವರಿ 11 ರವರೆಗೆ ನಡೆಯಲಿದೆ. ಬಜೆಟ್ ಅಧಿವೇಶನದ ಎರಡನೇ ಭಾಗವು ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ನಡೆಯಲಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ