ನವದೆಹಲಿ: ಖಾತೆಯಿಂದ ಹಣ ಕಡಿತವಾದರೂ ಎಟಿಎಂನಲ್ಲಿ ಹಣ ಸಿಗದೆ ಇದ್ದರೇ ಬ್ಯಾಂಕ್ಗಳು ನಿಗದಿತ ಅವಧಿಯಲ್ಲಿ ವಿಫಲವಾದ ವಹಿವಾಟುಗಳನ್ನು ಪುರಸ್ಕರಿಸಬೇಕು. ತಪ್ಪಿದರೆ ದಿನಕ್ಕೆ ₹ 100ಯಂತೆ ಗ್ರಾಹಕರಿಗೆ ಪರಿಹಾರದ ಮೊತ್ತ ನೀಡಬೇಕು ಎಂದು ಆರ್ಬಿಐ ಎಲ್ಲ ಬ್ಯಾಂಕ್ಗಳಿಗೆ ಇತ್ತೀಚೆಗೆ ಎಚ್ಚರಿಕೆಯ ನಿರ್ದೇಶನ ನೀಡಿದೆ.
ಎಟಿಎಂನಲ್ಲಿ ಹಣ ತೆಗೆಯುವಾಗ ಎಷ್ಟೋ ಬಾರಿ ಗ್ರಾಹಕರ ಖಾತೆಯಿಂದ ಹಣ ಡೆಬಿಟ್ ಆದರೂ ಹಣ ಬಂದಿರುವುದಿಲ್ಲ. 'ನೋ ಕ್ಯಾಶ್' ಎಂಬ ಫಲಕದಿಂದ ಗ್ರಾಹಕರು ನಿರಾಸೆಯಿಂದ ಹಿಂದುರುಗಬೇಕಾಗುತ್ತದೆ. ಇಂತಹ ನಡೆಗಳನ್ನು ತಪ್ಪಿಸಬೇಕೆಂದು ಆರ್ಬಿಐ ತನ್ನ ಸಹವರ್ತಿ ಬ್ಯಾಂಕ್ಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ.
ಎಟಿಎಂನಲ್ಲಿ ಹಣ ತೆಗೆಯುವಾಗ ಖಾತೆಯಿಂದ ಡೆಬಿಟ್ ಆಗಿ ಹಣ ಸಿಗದೆ ಇದ್ದರೇ ಅಥವಾ ಕಡಿಮೆ ಬಂದರೆ ಗ್ರಾಹಕರು ಲಿಖಿತ ರೂಪದಲ್ಲಿ ಸಂಬಂಧಪಟ್ಟ ಬ್ಯಾಂಕ್ಗೆ ದೂರು ನೀಡಬೇಕು. ದೂರು ತೆಗೆದುಕೊಂಡ ಬ್ಯಾಂಕ್ ಟರ್ನ್ ಅರೌಂಡ್ ಟೈಮ್ (ಟಿಎಟಿ) + 5 ದಿನಗಳ ವಿನಾಯಿತಿಯೊಂದಿಗೆ ಆರು ದಿನಗಳ ಒಳಗೆ ದೂರುದಾರರ ಖಾತೆಗೆ ಹಣ ವರ್ಗಾಯಿಸಬೇಕು. ಒಂದು ವೇಳೆ ವಿಳಂಬವಾದರೆ ಪರಿಹಾರ ಮೊತ್ತವಾಗಿ ದಿನಕ್ಕೆ ₹ 100 ನೀಡಬೇಕು ಎಂದು ಸೂಚಿಸಿದೆ.
ಒಂದು ವೇಳೆ ಬ್ಯಾಂಕ್ಗಳು ಪರಿಹಾರ ಮೊತ್ತ ನೀಡಲು ಅಥವಾ ನಿಗದಿತ ಸಮಯದಲ್ಲಿ ಪರಿಹರಿಸಲು ವಿಫಲವಾದರೇ ಗ್ರಾಹಕರು ಆರ್‌ಬಿಐನ ಬ್ಯಾಂಕಿಂಗ್ ಓಂಬುಡ್ಸ್ಮನ್ಗೆ (ಬ್ಯಾಂಕುಗಳಲ್ಲಿ ಇತ್ಯರ್ಥವಾಗದ ವಿಚಾರಗಳನ್ನು, ಬ್ಯಾಂಕ್ ಸೇವೆಗಳಲ್ಲಿ ತೊಡಕುಗಳ ಕುರಿತು ಬ್ಯಾಂಕಿಂಗ್ ಓಂಬುಡ್ಸ್‌ಮನ್ ಅವರಿಗೆ ದೂರು ನೀಡಿ ಪರಿಹಾರ ಪಡೆಯಬಹುದು) ದೂರು ದಾಖಲಿಸಬಹುದು. ದೂರಿನ ಮೇರೆಗೆ ಆರ್ಬಿಐ ಬ್ಯಾಂಕ್ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ.