ನವದೆಹಲಿ: ಸತತ ಮೂರು ತಿಂಗಳ ಕುಸಿತದ ಬಳಿಕ ಕೈಗಾರಿಕಾ ಉತ್ಪಾದನೆಯು ಮತ್ತೆ ಪ್ರಗತಿಯತ್ತ ಮರಳಿದೆ.
ನವೆಂಬರ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆಯು ಶೇ 1.8ರಷ್ಟು ಬೆಳವಣಿಗೆ ದಾಖಲಿಸಿದೆ. ತಯಾರಿಕೆ ವಲಯದಲ್ಲಿನ ಹೆಚ್ಚಿನ ಚಟುವಟಿಕೆಗಳ ಫಲವಾಗಿ ಪ್ರಗತಿ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ.
ತಯಾರಿಕ ವಲಯವು ಶೇ 2.7ರಷ್ಟು ಬೆಳವಣಿಗೆ ಕಂಡಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ ಶೇ 0.7ರಷ್ಟು ಕುಸಿದಿತ್ತು. ವಿದ್ಯುತ್ ಉತ್ಪಾದನೆಯು ವರ್ಷದ ಹಿಂದಿನ ಶೇ 5ರಷ್ಟು ಬೆಳವಣಿಗೆಗೆ ಹೋಲಿಸಿದರೆ ಈ ಬಾರಿ ಶೇ 5ರಷ್ಟು ಕುಸಿತ ಕಂಡಿದೆ. ಗಣಿಗಾರಿಕೆ ವಲಯವೂ ಶೇ 1.7ರಷ್ಟು ಕುಸಿದಿದೆ.
ಈ ಹಣಕಾಸು ವರ್ಷದ ಏಪ್ರಿಲ್- ನವೆಂಬರ್ ಅವಧಿಯಲ್ಲಿ ಕೈಗಾರಿಕ ತಯಾರಿಕಾ ಸೂಚ್ಯಂಕದ (ಐಐಪಿ) ಬೆಳವಣಿಗೆಯು ಶೇ 0.6ರಷ್ಟಾಗಿದೆ. ವರ್ಷದ ಹಿಂದೆ ಇದು ಶೇ 5ರಷ್ಟು ಇತ್ತು. 2018ರ ನವೆಂಬರ್ನಲ್ಲಿ ಶೇ 0.2ರಷ್ಟು ಹೆಚ್ಚಳವಾಗಿತ್ತು.