ನವದೆಹಲಿ: ಶೆಲ್ ಅಥವಾ ಸಂಶಯಾಸ್ಪದ ಸಂಸ್ಥೆಗಳನ್ನು ಬಳಸಿ ಅಂದಾಜು 1,000 ಕೋಟಿ ರೂ. ಹವಾಲಾ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಚೀನಾದ ಪ್ರಜೆಯೊಬ್ಬರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರೀಯ ಹಣಕಾಸು ಅಪರಾಧ ವಿಚಾರಣೆ ಏಜೆನ್ಸಿಯು 42 ವರ್ಷದ ಚಾರ್ಲಿ ಪೆಂಗ್ ಅಲಿಯಾಸ್ ಲುವೋ ಸಾಂಗ್ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಆಗಸ್ಟ್ 12ರಂದು ಪೆಂಗ್ ಮತ್ತು ಅವನ ಕೆಲವು ಸಹಚರ ಮೇಲೆ ಬ್ಯಾಂಕರ್‌ಗಳು ಮತ್ತು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದರು. ಗುರ್‌ಗಾಂವ್‌ನಲ್ಲಿ ಪೆಂಗ್ ಸೇರಿದಂತೆ ಕನಿಷ್ಠ ಎರಡು ಡಜನ್ ಪ್ರದೇಶದಲ್ಲಿ ತೆರಿಗೆ ಸಂಬಂಧಿತ ದಾಖಲೆಗಳ ಶೋಧಕಾರ್ಯ ನಡೆಸಲಾಯಿತು.
ಚೀನಾದ ಆಜ್ಞೆಯ ಮೇರೆಗೆ ನಾನಾ ನಕಲಿ ಘಟಕಗಳಲ್ಲಿ 40ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆದಿದ್ದ. ಈ ಅವಧಿಯಲ್ಲಿ 1,000 ಕೋಟಿ ರೂ.ಗೂ ಹೆಚ್ಚಿನ ಸಾಲ ಪಡೆಯಲಾಗಿತ್ತು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ತಿಳಿಸಿತ್ತು.
ತೆರಿಗೆ ಇಲಾಖೆಯ ಸಾಕ್ಷ್ಯ ಮತ್ತು ದಾಖಲೆಗಳನ್ನು ಇಡಿ ಪರಿಶೀಲಿಸಿ ಕ್ರಮ ತೆಗೆದುಕೊಂಡಿದೆ. ದೆಹಲಿ ಪೊಲೀಸ್ ವಿಶೇಷ ಸೆಲ್ ಪೆಂಗ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಸಂಬಂಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಮೊದಲು ಎಫ್ಐಆರ್ ದಾಖಲಿಸಿಕೊಂಡಿದೆ.
ಮೂಲಗಳ ಪ್ರಕಾರ, ಪೆಂಗ್ ಅವರು ನಕಲಿ ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದಾರೆಂದು ಆರೋಪಿಸಲಾಗಿದೆ. ಮನಿ ಲಾಂಡರಿಂಗ್ ಮಾಡಲು ವೆಬ್ ಕಂಪನಿಗಳನ್ನು ಸ್ಥಾಪಿಸಿ ಕಳೆದ 2-3 ವರ್ಷಗಳಲ್ಲಿ ಹವಾಲಾ ಹಣ ಚೀನಾಕ್ಕೆ ವರ್ಗಾಯಿಸಿದ್ದಾನೆ.
ವಂಚನೆ ಮತ್ತು ಫೋರ್ಜರಿ ಆರೋಪದ ಮೇಲೆ ಪೆಂಗ್ ಅವರನ್ನು 2018ರ ಸೆಪ್ಟೆಂಬರ್‌ನಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ಬಂಧಿಸಿತ್ತು. ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಮಣಿಪುರ ಮೂಲದ ಮಹಿಳೆಯನ್ನು ಮದುವೆಯಾದ ನಂತರ ಪೆಂಗ್, ನಕಲಿ ಪಾಸ್‌ಪೋರ್ಟ್ ಬಳಕೆ ಮಾಡಿಕೊಂಡಿದ್ದ. ದಾಳಿಯ ವೇಳೆ ಆತನಿಂದ ಕೆಲವು ನಕಲಿ ಆಧಾರ್ ಕಾರ್ಡ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಪೆಂಗ್ ಅವರನ್ನು ಕೇಂದ್ರ ಗುಪ್ತಚರ ಸಂಸ್ಥೆಗಳ ಹೊರತಾಗಿ ತೆರಿಗೆ ಇಲಾಖೆ ತೀವ್ರ ವಿಚಾರಣೆ ನಡೆಸುತ್ತಿದೆ.
ಈ ಪ್ರಕರಣದಲ್ಲಿ ಶೆಲ್ ಸಂಸ್ಥೆಗಳಿಗೆ ಲಿಂಕ್ ಮಾಡಲಾದ ಡಜನ್ಗಟ್ಟಲೇ ಬ್ಯಾಂಕ್ ಖಾತೆಗಳನ್ನು ಹೊಂದಿದವರ ವಿವರಗಳನ್ನು ತೆರಿಗೆ ಇಲಾಖೆ ಪತ್ತೆ ಹಚ್ಚುತ್ತಿದೆ.