ನವದೆಹಲಿ: ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭ. ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರು ಸಂಸತ್ತಿನ ಜಂಟಿ ಸದನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ರಾಷ್ಟ್ರಪತಿಗಳು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಬೆಳಿಗ್ಗೆ 11 ಗಂಟೆಗೆ ತಮ್ಮ ಭಾಷಣ ಆರಂಭಿಸಲಿದ್ದು, ಕಲಾಪದಲ್ಲಿ ಉಪರಾಷ್ಟ್ರಪತಿ/ ರಾಜ್ಯಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು ಕೂಡ ಭಾಗವಹಿಸಲಿದ್ದಾರೆ.
2019-20ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು 2020-21ನೇ ಸಾಲಿನ ಬಜೆಟ್ ಮಂಡನೆಗೆ ಪೂರ್ವಭಾವಿಯಾಗಿ ಕೇಂದ್ರ ಹಣಕಾಸು ಸಚಿವಾಲಯ ಇವತ್ತು ಬಿಡುಗಡೆ ಮಾಡಲಿದೆ. ನಾಳೆ (ಶನಿವಾರ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎರಡನೇ ಆಯವ್ಯಯ ಮಂಡಿಸಲಿದ್ದಾರೆ.
ಬೆಲೆ ಏರಿಕೆ, ವಿತ್ತೀಯ ಕೊರತೆ ಹೆಚ್ಚಳ, ನಿರುದ್ಯೋಗ, ಹಣದುಬ್ಬರ, ಪ್ರಮುಖ ವಲಯಗಳ ಬೆಳವಣಿಗೆ ಕುಸಿತದಂತಹ ಸಂಕಷ್ಟದ ಸಂದರ್ಭದಲ್ಲಿ ಬಿಡುಗಡೆ ಆಗಲಿರುವ ಆರ್ಥಿಕ ಸಮೀಕ್ಷೆಯ ಮೇಲೆ ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದೆ.