ನವದೆಹಲಿ: ದುರ್ಬಲ ಆರ್ಥಿಕತೆ ಮತ್ತು ಮೂಲಸೌಕರ್ಯ ವೆಚ್ಚಗಳು ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಉಕ್ಕು ಮತ್ತು ಸಿಮೆಂಟ್ ಬೆಲೆಯಲ್ಲಿ ಭಾರಿ ಇಳಿಕೆ ಉಂಟಾಗಿದೆ.
ಆಟೋ ಮತ್ತು ಸಿಮೆಂಟ್, ವಾಷಿಂಗ್ ಮಷಿನ್, ರೆಫ್ರಿಜಿರೇಟರ್, ಏರ್ಕಂಡಿಷನರ್ ಸೇರಿದಂತೆ ವೈಟ್ ಗೂಡ್ಸ್ ಕ್ಷೇತ್ರಗಳ ಉತ್ಪನ್ನ ಬೇಡಿಕೆ ಇಳಿಮುಖವಾಗಿದೆ. ಟನ್ ಸ್ಟೀಲ್ ಬೆಲೆಯು ಕಳೆದು ಎರಡು ವರ್ಷಗಳಲ್ಲಿ ಮೊದಲ ಬಾರಿಗೆ 40,000 ರೂ.ಗಿಂತಲೂ ಕಡಿಮೆ ದರದಲ್ಲಿ ಮಾರಾಟ ಆಗುತ್ತಿದೆ. ಜೊತೆಗೆ ಜೂನ್‌ನಿಂದ ಸಿಮೆಂಟ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.
ಕಳೆದ ಕೆಲವು ತಿಂಗಳುಗಳಲ್ಲಿನ ತೀವ್ರಗತಿಯ ಬೇಡಿಕೆಯ ಕುಸಿತದಿಂದಾಗಿ ಹಾಟ್- ರೋಲ್ಡ್ ಕಾಯಿಲ್ ವಿಧದ ಪ್ರತಿ ಟನ್ ಸ್ಟೀಲ್ ₹ 38,000 ರಿಂದ ₹ 39,000 ದರದಲ್ಲಿ ಖರೀದಿ ಆಗುತ್ತಿದೆ. ನಿರ್ಮಾಣ ವಲಯಕ್ಕೆ ಸಾಲ ಒದಗಿಸುವ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಕ್ಷೇತ್ರ ಬಿಕ್ಕಟ್ಟನಲ್ಲಿ ಇರುವುದರಿಂದ ಉಕ್ಕಿನ ಬೇಡಿಕೆಯ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಕಳೆದ 10 ತಿಂಗಳಲ್ಲಿ ಆಟೋ (ತಯಾರಿಕಾ) ವಲಯದ ಉತ್ಪನ್ನಗಳ ಮಾರಾಟದಲ್ಲಿಯೂ ಕುಸಿತ ಕಂಡುಬಂದಿದೆ.
ಸಿಮೆಂಟ್ನ ಬೆಲೆಯನ್ನು ಸ್ಥಳೀಯ ಬೇಡಿಕೆ ಮತ್ತು ಲಭ್ಯತೆಯ ಮೇಲೆ ನಿರ್ಧರಿಸಲಾಗುತ್ತದೆ. ನಿರ್ದಿಷ್ಟ ಪ್ರದೇಶದಲ್ಲಿನ ಕಂಪನಿಯ ಸಿಮೆಂಟ್ ಉತ್ಪಾದನೆಯ ಕಡಿತದಿಂದ ಬೆಲೆಗಳು ಗಣನೀಯವಾಗಿ ಏರಿಕೆ ಆಗುತ್ತವೆ. ಉತ್ಪಾದನೆ ಇಳಿಕೆಯ ಮಧ್ಯೆಯೂ ಉಕ್ಕಿನಂತೆ ಸಿಮೆಂಟ್ ದರದಲ್ಲಿ ಇಳಿಕೆ ಕಂಡುಬಂದಿದೆ.
ಜೂನ್ ತಿಂಗಳಲ್ಲಿ ಸರಾಸರಿ ಸಿಮೆಂಟ್ ಬೆಲೆಯಲ್ಲಿ ಶೇ 2ರಷ್ಟು ಇಳಿಕೆಯಾಗಿದ್ದು, 50 ಕೆ.ಜಿ. ಚೀಲಕ್ಕೆ ₹ 366ಯಲ್ಲಿ ಮಾರಾಟ ಆಗುತ್ತಿದೆ. ಜೂನ್ ತ್ರೈಮಾಸಿಕದಲ್ಲಿ ಬೆಲೆಯು ಶೇ 4ರಷ್ಟು ಏರಿಕೆಯಾಗಿತ್ತು. ಮೇ ತಿಂಗಳ ಹಠಾತ್ ಬೆಲೆ ಏರಿಕೆಯಿಂದಾಗಿ ಏಪ್ರಿಲ್‌ನಲ್ಲಿ ಉತ್ಪಾದಿಸಿದ ಪ್ರತಿ 50 ಕೆ.ಜಿ. ಚೀಲ ₹ 359ಯಿಂದ ₹ 375ಕ್ಕೆ ಏರಿಕೆ ಆಗಿತ್ತು. ಆದರೆ, ಜೂನ್ ತಿಂಗಳಲ್ಲಿ ಇದೇ ಪ್ರಮಾಣದ ದರ ಏರಿಕೆ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ.
ಗೃಹ ಸಾಲದ ಬಡ್ಡಿದರ ಇಳಿಕೆ
ರೆಪೋ ದರ ಇಳಿಕೆ ಮಾಡುತ್ತಿದ್ದಂತೆ ಬ್ಯಾಂಕ್‌ಗಳು ತ್ವರಿತವಾಗಿ ಕ್ರಮ ಕೈಗೊಂಡು ತಮ್ಮ ಗ್ರಾಹಕರ ಗೃಹ, ವಾಹನ ಹಾಗೂ ವೈಯಕ್ತಿಕ ಸಾಲದ ಬಡ್ಡಿ ದರವನ್ನೂ ಕಡಿಮೆ ಮಾಡಬೇಕು ಎಂದು ಆರ್‌ಬಿಐ ಸೂಚಿಸಿತ್ತು. ಈ ಹಣಕಾಸು ವರ್ಷದಲ್ಲಿ 3 ಬಾರಿ ಆರ್‌ಬಿಐ ರೆಪೋ ದರ ಇಳಿಕೆ ಮಾಡಿದ್ದು, ಒಟ್ಟಾರೆ ಶೇ. 0.75 ಇಳಿಕೆಯಾಗಿದೆ. ಇದರಿಂದ ಗೃಹ ಸಾಲದ ಬಡ್ಡಿದರದ ಹೊರೆ ಕಡಿಮೆಯಾಗಿದೆ.