ಪದತ್ಯಾಗಕ್ಕೂ ಮುನ್ನ ಚೀನಾಗೆ ಮರ್ಮಾಘಾತ: ಟ್ರಂಪರ ಆ ಒಂದು ಸಹಿಗೆ ಡ್ರ್ಯಾಗನ್ ಕಕ್ಕಾಬಿಕ್ಕಿ! - ಡೊನಾಲ್ಡ್ ಟ್ರಂಪ್ ವರ್ಸಸ್ ಕ್ಸಿ ಜಿನ್ಪಿಂಗ್
ತಮ್ಮ ಅಮೆರಿಕ ಫಸ್ಟ್ ಅಭಿಯಾನದ ಅಡಿ ಟ್ರಂಪ್, ಚೀನಾವನ್ನು ಅಮೆರಿಕ ಮತ್ತು ಜಾಗತಿಕ ಪ್ರಜಾಪ್ರಭುತ್ವಕ್ಕೆ ಅತ್ಯಂತ ದೊಡ್ಡ ಬೆದರಿಕೆ ಎಂದು ಚಿತ್ರಿಸಿದ್ದಾರೆ. ಅದರೊಂದಿಗೆ ವ್ಯಾಪಾರ ಯುದ್ಧ ಅನುಸರಿಸಿದ್ದಾರೆ. ಚೀನಾದ ಟೆಕ್ ಸಂಸ್ಥೆಗಳಿಗೆ ಕಿರುಕುಳ ನೀಡಿ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹಬ್ಬಲು ಬೀಜಿಂಗ್ ಕಾರಣವೆಂದು ಆರೋಪಗಳನ್ನು ಹೊರಿಸಿದ್ದರು.
ವಾಷಿಂಗ್ಟನ್: ಬೀಜಿಂಗ್‌ನ ಮಿಲಿಟರಿ ಮತ್ತು ಭದ್ರತಾ ಉಪಕರಣಗಳ ಪೂರೈಕೆಯಲ್ಲಿ ತೊಡಗಿಕೊಳ್ಳುವ ಚೀನಾದ ಸಂಸ್ಥೆಗಳಲ್ಲಿ ಅಮೆರಿಕನ್ನರು ಹೂಡಿಕೆ ಮಾಡುವುದನ್ನು ನಿಷೇಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಅಭಿವೃದ್ಧಿ ಮತ್ತು ನಿಯೋಜನೆ ಸೇರಿದಂತೆ ಮಿಲಿಟರಿ ಮತ್ತು ಗುಪ್ತಚರ ಸೇವೆಗಳಿಗೆ ಹಣಕಾಸಿನ ನೆರವು ನೀಡುವ ಅಮೆರಿಕ ಹೂಡಿಕೆ ಬಂಡವಾಳವನ್ನು ಚೀನಾ ಶೋಷಣೆಗೆ ಬಳಸುತ್ತಿದೆ ಎಂದು ಗುರುವಾರ 31 ಕಂಪನಿಗಳನ್ನು ಯುಎಸ್ ಪಟ್ಟಿ ಮಾಡಿದೆ.
ಟ್ರಂಪ್ ಅಧ್ಯಕ್ಷತೆಯಲ್ಲಿ ಅಮೆರಿಕ - ಚೀನಾ ಸಂಬಂಧಗಳು ತೀವ್ರವಾಗಿ ಹದಗೆಟ್ಟಿವೆ. ಚೀನಾದ ಆರ್ಥಿಕ ಮತ್ತು ಮಿಲಿಟರಿ ವಿಸ್ತರಣೆ ಗುರಿ ಆಗಿಸಿಕೊಂಡು ಕಾರ್ಯನಿರ್ವಾಹಕ ಆದೇಶ ಮತ್ತು ನಿಯಂತ್ರಕ ಕ್ರಮಗಳ ಸರಣಿಯ ಕ್ರಮಗಳು ಇತ್ತೀಚಿನ ಸೇರ್ಪಡೆಯಾಗಿವೆ.
ತಮ್ಮ ಅಮೆರಿಕ ಫಸ್ಟ್( ಅಮೆರಿಕ ಮೊದಲು) ಅಭಿಯಾನದ ಅಡಿ ಟ್ರಂಪ್, ಚೀನಾವನ್ನು ಅಮೆರಿಕ ಮತ್ತು ಜಾಗತಿಕ ಪ್ರಜಾಪ್ರಭುತ್ವಕ್ಕೆ ಅತ್ಯಂತ ದೊಡ್ಡ ಬೆದರಿಕೆ ಎಂದು ಚಿತ್ರಿಸಿದ್ದಾರೆ. ಅದರೊಂದಿಗೆ ವ್ಯಾಪಾರ ಯುದ್ಧ ಅನುಸರಿಸಿದ್ದಾರೆ. ಚೀನಾದ ಟೆಕ್ ಸಂಸ್ಥೆಗಳಿಗೆ ಕಿರುಕುಳ ನೀಡಿ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹಬ್ಬಲು ಬೀಜಿಂಗ್ ಕಾರಣವೆಂದು ಆರೋಪಗಳನ್ನು ಹೊರಿಸಿದ್ದರು.
ಪ್ರಮುಖ ದೂರಸಂಪರ್ಕ, ನಿರ್ಮಾಣ ಮತ್ತು ತಂತ್ರಜ್ಞಾನ ಸಂಸ್ಥೆಗಳಾದ ಚೀನಾ ಮೊಬೈಲ್, ಚೀನಾ ಟೆಲಿಕಾಂ, ವಿಡಿಯೋ ಕಣ್ಗಾವಲು ಸಂಸ್ಥೆ ಹಿಕ್ವಿಷನ್ ಮತ್ತು ಚೀನಾ ರೈಲ್ವೆ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಒಳಗೊಂಡಂತೆ ಪಟ್ಟಿಮಾಡಲಾದ ಇತರ ಯಾವುದೇ ಕಂಪನಿಗಳಲ್ಲಿ ಅಮೆರಿಕದ ಕಂಪನಿಗಳು ಮತ್ತು ವ್ಯಕ್ತಿಗಳು ಷೇರುಗಳನ್ನು ಹೊಂದುವುದಕ್ಕೆ ತಡೆಯೊಡ್ಡಲಾಗಿದೆ.
ಪ್ರಸ್ತುತ ಆದೇಶದ ಪ್ರಕಾರ, ಹೂಡಿಕೆದಾರರು ಬೀಜಿಂಗ್ ಸಂಬಂಧಿತ ಕಂಪನಿಗಳಿಂದ ಹೊರಬರಲು ಒಂದು ವರ್ಷ ಅವಧಿ ಇರುತ್ತದೆ. ಜನವರಿ 11ರಿಂದ ಇದು ಜಾರಿಗೆ ಬರಲಿರುವ ಈ ಕ್ರಮದಿಂದ, ಶುಕ್ರವಾರ ಹಾಂಕಾಂಗ್ ಷೇರು ಮಾರುಕಟ್ಟೆಯಲ್ಲಿ ಪ್ರತಿಧ್ವನಿಸಿತು.
ಸರ್ಕಾರಿ ಸ್ವಾಮ್ಯದ ಚೀನಾ ಟೆಲಿಕಾಂನ ಷೇರುಗಳು ಒಂಬತ್ತು ಪ್ರತಿಶತಕ್ಕಿಂತಲೂ ಹೆಚ್ಚು ಕುಸಿದವು. ಚೀನಾ ಮೊಬೈಲ್ ಶೇ 6ರಷ್ಟು ಮತ್ತು ಚೀನಾ ರೈಲ್ವೆ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ 5 ಪ್ರತಿಶತಕ್ಕಿಂತಲೂ ಹೆಚ್ಚು ಕುಸಿದಿದೆ.