ಹೊಸದಿಲ್ಲಿ: ನಾಗರಿಕರ ದಿನನಿತ್ಯದ ಜೀವನವನ್ನು ಸುಲಭಗೊಳಿಸಲು, ಹಣಕಾಸು ವ್ಯವಹಾರಗಳನ್ನು ತ್ವರಿತ ಹಾಗೂ ಪಾರದರ್ಶಕ ರೀತಿಯಲ್ಲಿ ನಿಭಾಯಿಸಲು ಹಾಗೂ ಇನ್ನೂ ಹಲವಾರು ಸೇವೆಗಳನ್ನು ಬೆರಳ ತುದಿಯಲ್ಲೇ ಪಡೆಯಬಹುದಾದ ಮಹತ್ವಾಕಾಂಕ್ಷಿ ಯೋಜನೆ ಡಿಜಿಟಲ್ ಇಂಡಿಯಾ. ಆದರೆ ಈಗ ಕೊರೊನಾ ಲಾಕ್ಡೌನ್ನಿಂದಾಗಿ ಡಿಜಿಟಲ್ ಇಂಡಿಯಾ ಬೆಟ್ಟದಷ್ಟು ಸವಾಲುಗಳನ್ನು ಎದುರಿಸುವಂತಾಗಿರುವುದು ಮಾತ್ರ ಸತ್ಯ.
ಸಾವಿರಾರು ಆ್ಯಪ್ ಆಧರಿತ ಸೇವೆಗಳು ಸ್ಥಗಿತ:
ಮನೆಯಲ್ಲೇ ಕುಳಿತು ದಿನಸಿ ಅಥವಾ ಇನ್ನಾವುದೋ ಅಗತ್ಯ ವಸ್ತುಗಳನ್ನು ಒಂದು ಆ್ಯಪ್ ಮೂಲಕ ಆರ್ಡರ್ ಮಾಡಿದರೆ ಸಾಕು, ಬೇಕಾದ ವಸ್ತು ಮನೆ ಬಾಗಿಲಿಗೇ ಬರುತ್ತಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಡಿಜಿಟಲ್ ಇಂಡಿಯಾದ ಬಹುತೇಕ ಸೌಲಭ್ಯಗಳು ಸ್ಥಗಿತಗೊಂಡಿವೆ. ಇದನ್ನೇ ನಂಬಿಕೊಂಡಿದ್ದ ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಉಬರ್, ಓಲಾ, ಸ್ವಿಗ್ಗಿ, ಜೊಮ್ಯಾಟೊ, ಬಿಗ್ ಬಾಸ್ಕೆಟ್, ಗ್ರೋಫರ್ಸ್, ಫ್ಲಿಪ್ಕಾರ್ಟ್, ಅಮೆಜಾನ್ ಹೀಗೆ ಒಂದಲ್ಲ ಎರಡಲ್ಲ ಸಾವಿರಾರು ಆ್ಯಪ್ ಆಧರಿತ ಸೇವೆಗಳು ನಿಂತು ಹೋಗಿವೆ. ಈಗ ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದವರ ಭವಿಷ್ಯದ ಮೇಲೆ ಕಾರ್ಮೋಡ ಕವಿದಿದೆ.
ಜೊಮ್ಯಾಟೊ ಆ್ಯಪ್ ಸೇವೆಗಳು ಸ್ಥಗಿತಗೊಂಡಿದ್ದರಿಂದ ಸಂಸ್ಥೆಯ ಹಲವಾರು ಉದ್ಯೋಗಿಗಳು ತಾವಾಗಿಯೇ ಸಂಬಳ ಕಡಿತ ಮಾಡುವಂತೆ ಕಂಪನಿಗೆ ಮನವಿ ಮಾಡಿದ್ದಾರೆ ಎಂದು ಜೊಮ್ಯಾಟೊ ಸಿಇಓ ದೀಪಿಂದರ್ ಗೋಯಲ್ ಹೇಳಿದ್ದಾರೆ.
ಉಬರ್ ಹಾಗೂ ಓಲಾ ಸೇವೆಯಿಲ್ಲ:
ಇನ್ನು ಉಬರ್ ಹಾಗೂ ಓಲಾ ಡ್ರೈವರ್ಗಳು ಕೆಲಸವಿಲ್ಲದೆ ಮನೆಯಲ್ಲೇ ಕುಳಿತಿದ್ದಾರೆ. ಸಾಲ ಮಾಡಿ ಕಾರು ಕೊಂಡು ಉಬರ್ ಅಥವಾ ಓಲಾಗೆ ಅಟ್ಯಾಚ್ ಮಾಡಿದವರು ಈ ತಿಂಗಳ ಸಾಲದ ಕಂತು ಕಟ್ಟುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.
ಲಕ್ಷಾಂತರ ಡೆಲಿವರಿ ಬಾಯ್ಸ್‌ಗೆ ಕೆಲಸವಿಲ್ಲ:
ಲಾಕ್ಡೌನ್ನಿಂದ ಊಟ ವಸತಿಗೆ ಪರದಾಡುವಂತಾಗಿದ್ದರಿಂದ ಲಕ್ಷಾಂತರ ಡೆಲಿವರಿ ಬಾಯ್ಗಳು ಮೆಟ್ರೊ ಸಿಟಿಗಳನ್ನು ತೊರೆದು ತಮ್ಮೂರು ಸೇರಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಮತ್ತೆ ಹೊಸ ನೌಕರರನ್ನು ಹುಡುಕಿ ಸೇವೆಗಳನ್ನು ಸುಸೂತ್ರಗೊಳಿಸುವುದು ಕಂಪನಿಗಳಿಗೂ ದೊಡ್ಡ ಸವಾಲಾಗಿದೆ.
ಬಿಗ್ ಬಾಸ್ಕೆಟ್ ಹಾಗೂ ಗ್ರೋಫರ್ಸ್ನಂಥ ದಿನಸಿ ಡೆಲಿವರಿ ಮಾಡುವ ಕಂಪನಿಗಳ ಕತೆ ಇನ್ನೊಂದು ರೀತಿಯದ್ದಾಗಿದೆ. ಲಾಕ್ಡೌನ್ನಲ್ಲಿ ಮನೆ ಮನೆಗೆ ದಿನಸಿ ಪೂರೈಸಲು ಇವರಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಬರುತ್ತಿರುವ ವಿಪರೀತ ಆರ್ಡರ್ಗಳನ್ನು ಡೆಲಿವರಿ ಮಾಡಲು ಹುಡುಗರೇ ಇಲ್ಲದಂಥ ಪರಿಸ್ಥಿತಿ ಇವರದು.
ಆನ್ಲೈನ್ ಆಧಾರಿತ ವ್ಯವಹಾರಗಳು ಭಾರಿ ಹೊಡೆತ:
ಒಟ್ಟಾರೆಯಾಗಿ ನೋಡಿದರೆ ಆನ್ಲೈನ್ ಆಧರಿತ ವ್ಯವಹಾರಗಳು ಭಾರಿ ಹೊಡೆತ ಅನುಭವಿಸುತ್ತಿದ್ದು, ಇನ್ನು ಕೆಲ ದಿನ ಪರಿಸ್ಥಿತಿ ಹೀಗೇಯೇ ಮುಂದುವರೆದಲ್ಲಿ ಈ ಕಂಪನಿಗಳು ತಾತ್ಕಾಲಿಕವಾಗಿಯಾದರೂ ಬಾಗಿಲು ಮುಚ್ಚುವ ಸಂದರ್ಭ ಬರಬಹುದು. ಈಗಲಾದರೂ ಕೇಂದ್ರ ಸರಕಾರ ಈ ಬಗ್ಗೆ ಗಮನಹರಿಸಿ ಆನ್ಲೈನ್ ಉದ್ಯಮದ ಬೆಂಬಲಕ್ಕೆ ನಿಲ್ಲಬೇಕಿದೆ.