ನವದೆಹಲಿ: ನೋಟು ರದ್ದತಿ ಹಾದಿ ತಪ್ಪಿದ ಪರಿಕಲ್ಪನೆಯಾಗಿದ್ದು, ಜಿಎಸ್ಟಿಯನ್ನು ಸರಿಯಾಗಿ ಜಾರಿಗೆ ತರುವಲ್ಲಿ ಎಡವಿದ್ದರಿಂದ ಭಾರತದ ಆರ್ಥಿಕತೆಯು ಕೆಟ್ಟ ಹೊಡೆತಕ್ಕೆ ಸಿಲುಕಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಮ್ ರಾಜನ್ ಆರೋಪಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಲಂಡನ್ನ ಕಿಂಗ್ಸ್ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ 150ನೇ ಜನ್ಮ ದಿನದ ಪ್ರಯುಕ್ತ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಹಾಗೂ ಪ್ರಸ್ತುತ ಆರ್ಥಿಕ ವಿದ್ಯಮಾನಗಳ ಬಗ್ಗೆ ಅವರು ಮಾತನಾಡಿದ್ದರು. ಈ ವೇಳೆ 'ತಪ್ಪಾಗಿ ಜಾರಿಗೆ ತಂದ ಜಿಎಸ್ಟಿ ಹಾಗೂ ನೋಟು ರದ್ದತಿ ನಿರ್ಧಾರ ಸರಿಯಿಲ್ಲ' ಎಂದಿದ್ದಾರೆ ಎಂಬುದು ವರದಿಯಾಗಿದೆ.
ಇತ್ತೀಚಿನ ಆರ್ಥಿಕತೆಯ ದೌರ್ಬಲ್ಯಕ್ಕೆ ಜಾಗತಿಕ ಅಂಶಗಳನ್ನು ದೂರುವುದು ಸಮರ್ಥನೀಯವಲ್ಲ. ನೋಟು ರದ್ದತಿ ಹಾಗೂ ಜಿಎಸ್ಟಿ ಜಾರಿಯು ಆರ್ಥಿಕತೆಯ ಮೇಲೆ ಪರಿಣಾಮ ಬೀರಿತು. ಈಗಾಗಲೇ ಅರ್ಥವ್ಯವಸ್ಥೆಯು ಹೂಡಿಕೆಯ ಕೊರತೆಯ ಮೂಲ ಸಮಸ್ಯೆಯನ್ನು ಎದುರಿಸುತ್ತಿದೆ. ಹೂಡಿಕೆಯ ವಿಷಯದಲ್ಲಿ ಭಾರತ ಈಗ ತನ್ನ ಇತರ ಸ್ನೇಹಿತ ರಾಷ್ಟ್ರಗಳಿಗಿಂತ ಹಿಂದುಳಿದಿದೆ. ಎನ್‌ಬಿಎಫ್‌ಸಿಯ ಹೊಸ ಬಿಕ್ಕಟ್ಟಿನ ಬೆಳವಣಿಗೆಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ಆಪಾದಿಸಿದ್ದಾರೆ.