ನವದೆಹಲಿ: ರಕ್ಷಣಾ ಸಚಿವಾಲಯ, ರಕ್ಷಣಾ ಉತ್ಪಾದನೆ ಮತ್ತು ರಫ್ತು ಪ್ರಚಾರ ನೀತಿ 2020ಯಡಿ, 2025ರ ವೇಳೆಗೆ ಬಾಹ್ಯಾಕಾಶ ಹಾಗೂ ರಕ್ಷಣಾ ಸರಕು ಮತ್ತು ಸೇವೆಯಲ್ಲಿ 35,000 ಕೋಟಿ ರೂ. (5 ಶತಕೋಟಿ ಅಮೆರಿಕನ್ ಡಾಲರ್) ರಫ್ತು ವಹಿವಾಟು ಸೇರಿ 1,75,000 ಕೋಟಿ ರೂ. (25 ಶತಕೋಟಿ ಅಮೆರಿಕನ್ ಡಾಲರ್) ಮೌಲ್ಯ ವಹಿವಾಟು ನಡೆಸಲಿದೆ ಎಂದು ಹೇಳಿದೆ.
ಕೆಲವು ದಿನಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಘೋಷಿಸಿತ್ತು. ಈ ಬಳಿಕ ರಕ್ಷಣಾ ಕ್ಷೇತ್ರ ಸಂಬಂಧಿತ ಡಿಪಿಇಪಿಪಿ 2020 ಕರಡು ರೂಪಿಸಿದೆ.
ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ 'ಆತ್ಮನಿರ್ಭರ ಭಾರತ ಪ್ಯಾಕೇಜ' ಅಡಿಯಲ್ಲಿ ಹಲವು ಘೋಷಣೆಗಳನ್ನು ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ರಕ್ಷಣಾ ಮತ್ತು ಏರೋಸ್ಪೇಸ್ ಕ್ಷೇತ್ರಗಳಲ್ಲಿ ಭಾರತವನ್ನು ವಿಶ್ವದ ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿ ಇರಿಸುವ ಉದ್ದೇಶದಿಂದ ರಕ್ಷಣಾ ಸಚಿವಾಲಯ, ರಕ್ಷಣಾ ಉತ್ಪಾದನೆ ಮತ್ತು ರಫ್ತು ಉತ್ತೇಜನ ನೀತಿ 2020 (ಡಿಪಿಇಪಿಪಿ 2020) ಅನ್ನು ರೂಪಿಸಿದೆ. ಡಿಪಿಇಪಿಪಿ- 2020 ಅನ್ನು ಸ್ವಾವಲಂಬನೆ ಮತ್ತು ರಫ್ತುಗಾಗಿ ದೇಶದ ರಕ್ಷಣಾ ಉತ್ಪಾದನಾ ಸಾಮರ್ಥ್ಯಗಳನ್ನು ಕೇಂದ್ರೀಕೃತವಾಗಿ ಇರಿಸಿಕೊಳ್ಳಲಾಗಿದೆ. ರಚನಾತ್ಮಕ ಮಹತ್ವವನ್ನು ಒದಗಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ.
ಗುಣಮಟ್ಟದ ಉತ್ಪನ್ನಗಳ ಜತೆಗೆ ಸಶಸ್ತ್ರ ಪಡೆಗಳ ಅಗತ್ಯಗಳನ್ನು ಪೂರೈಸಲಾಗುತ್ತದೆ. ಏರೋಸ್ಪೇಸ್ ಮತ್ತು ನೌಕಾ ಹಡಗು ನಿರ್ಮಾಣ ಉದ್ಯಮ ಸಹ ಇದರಲ್ಲಿ ಸೇರಿದೆ. ಒಂದು ಕ್ರಿಯಾತ್ಮಕ, ಸದೃಢ ಮತ್ತು ಸ್ಪರ್ಧಾತ್ಮಕ ರಕ್ಷಣಾ ಉದ್ಯಮವನ್ನು ಅಭಿವೃದ್ಧಿಪಡಿಸುವುದು ಈ ನೀತಿಯ ಮುಖ್ಯ ಗುರಿಯಾಗಿದೆ.
ಆಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಮತ್ತು ದೇಶಿಯವಾಗಿ ವಿನ್ಯಾಸ ಮತ್ತು ಅಭಿವೃದ್ಧಿಪಡಿಸುವ ಮೂಲಕ "ಮೇಕ್ ಇನ್ ಇಂಡಿಯಾ" ಉಪಕ್ರಮಗಳನ್ನು ಕೈಗೊಳ್ಳುವ ಉದ್ದೇಶವನ್ನು ಹೊಂದಿದೆ.