ಬೆಂಗಳೂರು: ನಿಮ್ಮ ಯಾವುದೇ ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ನೀವೇ ಸಮಸ್ಯೆಗೆ ಆಹ್ವಾನ ಕೊಟ್ಟಂತೆ. ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲೇ ಇದೆ ಎಂದು ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆಯೋಜಿಸಿದ್ದ 'ಸೈಬರ್ ಅಪರಾಧ ಮತ್ತು ಸುರಕ್ಷತೆ' ವೆಬಿನಾರ್ನಲ್ಲಿ ಪಾಲ್ಗೊಂಡು ಮಾತನಾಡಿದ ಸೈಬರ್ ತಜ್ಞರು, ಹೆಚ್ಚಾಗಿ ವಿದ್ಯಾವಂತರೇ ಸೈಬರ್ ಕಳುವಿನ ಬಲಿಪಶುಗಳಾಗುತ್ತಿದ್ದಾರೆ. ನಿಮ್ಮ ಯಾವುದೇ ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ನೀವೇ ಸಮಸ್ಯೆಗೆ ಆಹ್ವಾನ ಕೊಟ್ಟಂತೆ. ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲೇ ಇದೆ ಎಂದರು.
ಹಣದ ಆಮಿಷ, ವಿದೇಶದಲ್ಲಿ ಉದ್ಯೋಗ ಸೇರಿದಂತೆ ಇತರ ಯಾವುದೇ ಸಂದೇಶಗಳಲ್ಲಿ ಬರುವ ಲಿಂಕ್ಗಳನ್ನು ಬಳಸುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ವೆಬಿನಾರ್ನಲ್ಲಿ ಪಾಲ್ಗೊಂಡು ಮಾತನಾಡಿದ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ, ನಮಗೆ ಗೊತ್ತಿಲ್ಲದೇ ನಮ್ಮ ಮಾಹಿತಿ ಸೋರಿಕೆಯಾಗುತ್ತಿದೆ. ನಿಮಗೆ ಪರಿಚಯವೇ ಇಲ್ಲದವರಿಂದ ಫ್ರೆಂಡ್ ರಿಕ್ವೆಸ್ಟ್ ಬಂದಾಗ ವಿವೇಚಿಸಿ ಸಮ್ಮತಿಸಿ. ಯಾರೋ ನಿಮ್ಮ ಹೆಸರಿಗೆ ಇಷ್ಟು ಹಣ ಕಳುಹಿಸಿದ್ದಾರೆ ಮುಂತಾದ ಸಂದೇಶಗಳ ಬಗ್ಗೆ ಎಚ್ಚರವಿರಬೇಕು. ಪಾಸ್ವರ್ಡ್ ರೂಪಿಸುವಾಗ ನಿಮಗೆ ಸುಲಭವಾಗಿರಬೇಕು. ಆದರೆ ಹ್ಯಾಕರ್ಸ್ಗೆ ಕಷ್ಟವಾಗುವಂತೆ ರೂಪಿಸಿಕೊಳ್ಳಿ. ಮೊಬೈಲ್ನಲ್ಲಿ ಪ್ರಮುಖ ಮಾಹಿತಿ ಅಡಕ ಮಾಡುವ ಮುನ್ನ ಆಲೋಚಿಸಿ. ನೀವೇ ನೀಡುವ ಎಲ್ಲ ವಿವರಗಳೇ ಹ್ಯಾಕರ್ಸ್ಗೆ ಕಳುವು ಮಾಡುವ ಅವಕಾಶ ಒದಗಿಸುತ್ತದೆ. ಸೈಬರ್ ಶುಚಿತ್ವದ ಪಾಲನೆ ಅತ್ಯಂತ ಮುಖ್ಯ ಎಂದರು.
ಪ್ರಾಧ್ಯಾಪಕ ಡಾ. ಅನಂತಪ್ರಭು ಮಾತನಾಡಿ, ಅಂತರ್ಜಾಲ ಬಳಕೆಗೂ ಮುನ್ನ ಪ್ರತಿಯೊಬ್ಬರಿಗೂ ಸೈಬರ್ ಕಾನೂನುಗಳ ಬಗ್ಗೆ ಅರಿವಿರಬೇಕು. ಮೊಬೈಲ್ ಮತ್ತು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಹಾಕಿದ್ದರೆ ಅದನ್ನು ಸುರಕ್ಷತವಾಗಿರಿಸಿಕೊಳ್ಳುವ ಬಗ್ಗೆ ತಿಳಿದಿರಬೇಕು. ಪ್ರೈವೆಸಿ ಸೆಟ್ಟಿಂಗ್, ಪ್ರೊಫೈಲ್ ಸೆಟ್ಟಿಂಗ್ ಲಾಕ್ ಮಾಡುವ ಕುರಿತು ಮಾಹಿತಿ ಅಗತ್ಯ. ಉಚಿತವಾಗಿ ದೊರೆಯುವ ಆ್ಯಂಟಿವೈರಸ್ ತಂತ್ರಾಂಶಗಳನ್ನು ಬಳಸದಿರಿ ಮತ್ತು ಮೊಬೈಲ್ನಲ್ಲಿ ಅಪ್ಡೇಟ್ ಮಾಡುವ ಕುರಿತು ಸಂದೇಶ ಬಂದಾಗ ತಪ್ಪದೇ ನಿಮ್ಮ ಆ್ಯಪ್ಗಳನ್ನು ಅಪ್ಡೇಟ್ ಮಾಡಿ. ಮಾಡದಿದ್ದರೆ ಹ್ಯಾಕರ್ಸ್ಗೆ ನೀವೇ ಅನುಕೂಲ ಮಾಡಿಕೊಟ್ಟಂತೆ. ಯಾವುದೇ ಲಿಂಕ್ಗಳು ಬಂದಾಗ ಬಳಸುವ ಮೊದಲು ಯೋಚಿಸಿ ಎಂದು ಸಲಹೆ ನೀಡಿದರು.