ನವದೆಹಲಿ: ಪ್ರಸಕ್ತ ವರ್ಷದ ಮಾರ್ಚ್ ತಿಂಗಳಾಂತ್ಯಕ್ಕೆ ದೇಶದಲ್ಲಿ ಕರೆನ್ಸಿ ಚಲಾವಣೆಯು ₹ 21.10 ಲಕ್ಷ ಕೋಟಿಗೆ ತಲುಪಿದ್ದು, ನೋಟು ರದ್ದತಿ ಮುಂಚಿನ ಚಲಾವಣೆಗಿಂತ ಶೇ 17ರಷ್ಟು ಏರಿಕೆಯಾಗಿದೆ.
ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ ಮತ್ತು ಪ್ರಮಾಣವು ಶೇ 17ರಷ್ಟು ಮತ್ತು ಶೇ 6.2ರಷ್ಟು ಹೆಚ್ಚಳಗೊಂಡು ಕ್ರಮವಾಗಿ 21.10 ಲಕ್ಷ ಕೋಟಿ ಮತ್ತು 1,08,759 ಮಿಲಿಯನ್ ನೋಟುಗಳಿವೆ ಎಂಬುದು ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) 2019ರ ಹಣಕಾಸಿನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ರಿಟೇಲ್ ಎಲೆಕ್ಟ್ರಾನಿಕ್ ಪಾವತಿ ವರ್ಗಾವಣೆಯು ಶೇ 59ರಷ್ಟು ಏರಿಕೆಯಾಗಿ 23.3 ಬಿಲಿಯನ್ಗೆ ತಲುಪಿದೆ. 2018ರ ಜೂನ್ ವೇಳೆಗೆ 500 ರೂ. ಮುಖಬೆಲೆಯ ನೋಟುಗಳ ಪ್ರಮಾಣ ಶೇ 42ರಷ್ಟಿತ್ತು. ಇದೇ ಅವಧಿಯಲ್ಲಿ 2,000 ಮುಖಬೆಲೆಯ ನೋಟುಗಳ ಪ್ರಮಾಣವು 2019ರ ಮಾರ್ಚ್ ಅಂತ್ಯದವರೆಗೆ ₹ 6.58 ಲಕ್ಷ ಕೋಟಿಯಷ್ಟಾಗಿದ್ದು, ಮೌಲ್ಯದಲ್ಲಿ ಇಳಿಕೆಯಾಗಿದೆ. 2016ರ ನವೆಂಬರ್ನಲ್ಲಿ ₹ 2,000 ಮುಖಬೆಲೆಯ ನೋಟು ಬಿಡುಗಡೆ ಆದ ಮೇಲೆ ಅದರ ಚಲಾವಣೆಯ ಪ್ರಮಾಣ ಹಾಗೂ ಮೌಲ್ಯ ಎರಡರಲ್ಲೂ ಕಡಿಮೆಯಾಗುತ್ತ ಬಂದಿದೆ. ಗರಿಷ್ಠ ಮುಖಬೆಲೆಯ ನೋಟುಗಳ ಮೇಲಿನ ಜನರ ಅವಲಂಬನೆ ತಗ್ಗಿಸಲು ಕೇಂದ್ರ ಬ್ಯಾಂಕ್ ಯತ್ನಿಸಿರಬಹುದು ಎನ್ನಲಾಗಿದೆ.