ನವದೆಹಲಿ: ಜೂನ್ ತಿಂಗಳಲ್ಲಿ ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಪರೋಕ್ಷ ತೆರಿಗೆ ಸ್ಲ್ಯಾಬ್ ದರಗಳಲ್ಲಿ ಬದಲಾವಣೆ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೋವಿಡ್-19 ಹರಡುವಿಕೆ ತಡೆಗಟ್ಟುವ ಸಲುವಾಗಿ ವಿಧಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಸೇವಾ ವಲಯದಲ್ಲಿ ಪರಿಣಾಮ ಬೀರಿದೆ. ಹೀಗಾಗಿ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಹೆಚ್ಚಳ ಮಾಡಲು ಸರ್ಕಾರ ಆಸಕ್ತಿ ಹೊಂದಿಲ್ಲ ಎಂದು ಹೇಳಿವೆ.
ರಾಜ್ಯಗಳ ಮತ್ತು ಕೇಂದ್ರಕ್ಕೆ ಆದಾಯ ಹೆಚ್ಚಿಸಲು ಜಿಎಸ್‌ಟಿ ಮಂಡಳಿಯು ತೆರಿಗೆ ಸ್ಲ್ಯಾಬ್ ದರ ಹಾಗೂ ಕೆಲವು ಅನಿವಾರ್ಯವಲ್ಲದ ವಸ್ತುಗಳ ಮೇಲೆ ಸೆಸ್ ಏರಿಕೆ ಪರಿಗಣಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಹಲವು ರಾಜ್ಯಗಳು ಏಪ್ರಿಲ್ ಮಾಸಿಕದ ಜಿಎಸ್‌ಟಿ ಸಂಗ್ರಹದಲ್ಲಿ ಶೇ 80-90ರಷ್ಟು ಇದೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಡೇಟಾ ಬಿಡುಗಡೆ ಆಗಿಲ್ಲ. ಹೀಗಾಗಿ, ಜಿಎಸ್‌ಟಿ ಸ್ಲ್ಯಾಬ್ ದರ ಏರಿಕೆಗೆ ಹಿಂದೇಟು ಹಾಕಬಹುದು.
ಪ್ರಸ್ತುತ ಸಮಯದ ಅಗತ್ಯವೆಂದರೆ ಅನುಭೋಗದ ಮಟ್ಟ ಹೆಚ್ಚಿಸುವುದು ಮತ್ತು ಬೇಡಿಕೆಯನ್ನು ಸುಧಾರಿಸುವುದು ಮುಖ್ಯವಾಗಿದೆ. ವಸ್ತುಗಳನ್ನು ಅಗತ್ಯ ಮತ್ತು ಅನಿವಾರ್ಯವಲ್ಲ ಎಂದು ವರ್ಗೀಕರಿಸಿ ಬಳಿಕ ಅನಿವಾರ್ಯವಲ್ಲದ ವಸ್ತುಗಳ ಮೇಲೆ ತೆರಿಗೆ ಸ್ಲ್ಯಾಬ್ ದರ ಹೆಚ್ಚಿಸಲು ಕೇಂದ್ರ ಒಲವು ತೋರುತ್ತಿಲ್ಲ. ಆದರೆ, ಸ್ಲ್ಯಾಬ್ ದರ ಮತ್ತು ಪರಿಹಾರದ ಬಗ್ಗೆ ಮುಂದಿನ ತಿಂಗಳು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಹಣಕಾಸು ಸಚಿವಾಲಯದ ಅಧಿಕೃತ ಮೂಲಗಳು ತಿಳಿಸಿವೆ.
ಜಿಎಸ್‌ಟಿ ಮಂಡಳಿ ಸಭೆಯು ಕೇಂದ್ರ ಹಣಕಾಸು ಸಚಿವರ ನೇತೃತ್ವದಲ್ಲಿ ನಡೆಯಲಿದ್ದು, ವಿವಿಧ ರಾಜ್ಯಗಳ ಮಂಡಳಿ ಸದಸ್ಯರು ಭಾಗವಹಿಸುವರು.