ನವದೆಹಲಿ: ಇಡೀ ಪ್ರಪಂಚಕ್ಕೆ ಕೊರೊನಾ ವೈರಸ್ ವ್ಯಾಪಿಸಿದ್ದು, ಮನುಕುಲವನ್ನು ಇನ್ನಿಲ್ಲದಂತೆ ಕಂಗೆಡಿಸಿದೆ. ಇದಕ್ಕೆ ಮೂಲ ಕಾರಣ 'ನಾನು ಅಲ್ಲ' ಎಂದು ಚೀನಾ ಎಷ್ಟೇ ಸಮಜಾಯಿಸಿ ಕೊಟ್ಟಿದ್ದರೂ ಜಾಗತಿಕ ಸಮುದಾಯ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಈ ನಡುವೆ ತನ್ನ ಗಡಿಯಲ್ಲಿ ಹೊಸ ನೀತಿಗಳನ್ನು ತರಲು ಡ್ರ್ಯಾಗನ್ ಸಜ್ಜಾಗಿದೆ.
ಕೋವಿಡ್-19 ವೈರಸ್ನಿಂದ ಸಾಕಷ್ಟು ಹೊಡೆತ ತಿಂದು, ತನ್ನ ದೇಶಕ್ಕೆ ಉತ್ತೇಜನ ನೀಡಲು ಹೊಸ ನೀತಿಗಳನ್ನು ಅನುಷ್ಠಾನಗೊಳಿಸಿ ಈ ಹಿಂದಿನ ನೀತಿಗಳನ್ನು ಸುಧಾರಿಸಲು ಕಮ್ಯುನಿಸ್ಟ್ ರಾಷ್ಟ್ರ ಸನ್ನದ್ಧವಾಗುತ್ತಿದೆ.
ಶೆನ್ಜೆನ್ ಡೈಲಿ ಪ್ರಕಾರ, ಪ್ರೀಮಿಯರ್ ಲಿ ಕೆಕಿಯಾಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸ್ಟೇಟ್ ಕೌನ್ಸಿಲ್ನ ಕಾರ್ಯನಿರ್ವಾಹಕ ಸಭೆಯಲ್ಲಿ ಚೀನೀಯರ ಉದ್ಯೋಗ ಸ್ಥಿರ ಮತ್ತು ಜನರ ಜೀವನೋಪಾಯ ಕಾಪಾಡುವ ನೀತಿಗಳನ್ನು ಪರಿಚಯಿಸಲಿದೆ. ಹಳೆಯ ನೀತಿಗಳಲ್ಲಿ ಇನ್ನಷ್ಟು ಸುಧಾರಣೆ ತರಲು ಚಿಂತಿಸುತ್ತಿದೆ ಎಂಬುದು ತಿಳಿದು ಬಂದಿದೆ.
ಚೀನಾ ತೆಗೆದುಕೊಳ್ಳಲಿರುವ ನೀತಿ ಕ್ರಮಗಳು:
- ಸೂಕ್ಷ್ಮ, ಸಣ್ಣ ಮತ್ತು ಗೃಹ ವ್ಯಾಪಾರಸ್ಥರಿಗೆ ಹೆಚ್ಚಿನ ವ್ಯಾಟ್ ಪರಿಹಾರ
- ಸಾರಿಗೆ, ಅಡುಗೆ ಮತ್ತು ಪ್ರವಾಸೋದ್ಯಮದಂತಹ ಕೋವಿಡ್-19ನಿಂದ ತೀವ್ರ ಹಾನಿಗೊಳಗಾದ ಕ್ಷೇತ್ರಗಳಿಗೆ ನಷ್ಟದ ಕ್ಯಾರಿ-ಫಾರ್ವರ್ಡ್ ಅವಧಿಯನ್ನು 5-8 ವರ್ಷಗಳವರೆಗೆ ವಿಸ್ತರಣೆ
- ವೃದ್ಧಾಪ್ಯ ಪಿಂಚಣಿ ಅಥವಾ ಉದ್ಯೋಗದಾತರ 600 ಬಿಲಿಯನ್ ಯುವಾನ್ (85.7 ಬಿಲಿಯನ್ ಅಮೆರಿಕನ್ ಡಾಲರ್) ಸಾಲ ತಗ್ಗಿಸುವುದು ಅಥವಾ ಮನ್ನಾ
- ವರ್ಷದ ಮೊದಲಾರ್ಧದಲ್ಲಿ ನಿರುದ್ಯೋಗ ಮತ್ತು ಉದ್ಯೋಗ ಸುರಕ್ಷತಾ ವಿಮಾ ಯೋಜನೆ
- ವೇತನದಾರರನ್ನು ಸ್ಥಿರವಾಗಿಡಲು ನಿರುದ್ಯೋಗ ವಿಮಾ ಕಂತು ಮರುಪಾವತಿಯನ್ನು ಅಳವಡಿಕೆ. ಇದು 84 ದಶಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಪ್ರಯೋಜನ ನೀಡಿದೆ
- 140 ಬಿಲಿಯನ್ ಯುವಾನ್ ರಸ್ತೆ ಮತ್ತು ಎಕ್ಸ್‌ಪ್ರೆಸ್‌ವೇ ಟೋಲ್‌ಗಳ ಮನ್ನಾ ಮತ್ತು ವರ್ಷದ ಮೊದಲಾರ್ಧದಲ್ಲಿ ಉದ್ಯಮಗಳಿಗೆ ವಿದ್ಯುತ್ ಮತ್ತು ಅನಿಲ ದರ 67 ಬಿಲಿಯನ್ ಯುವಾನ್ನಷ್ಟು ಕಡಿತ
- ಅಗತ್ಯವಾದ ಮೀಸಲು ಅನುಪಾತ ಕಡಿತಗೊಳಿಸಿ 1.75 ಟ್ರಿಲಿಯನ್ ಯುವಾನ್ ಹಣ ಬಿಡುಗಡೆ
- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆ ಮತ್ತು ಗೃಹ ವ್ಯವಹಾರಗಳಿಗೆ 2.85 ಟ್ರಿಲಿಯನ್ ಯುವಾನ್ನಷ್ಟು ಕಡಿಮೆ ವೆಚ್ಚದ ಸಾಲ ಒದಗಿಸುವುದು
- ಮರುಮೌಲ್ಯಮಾಪನದ ಮೂಲಕ ಸಣ್ಣ ಮತ್ತು ಸೂಕ್ಷ್ಮ ವ್ಯವಹಾರಗಳಿಗೆ ಅಂತರ್ಗತ ಸಾಲಗಳನ್ನು ನೀಡಲು ಸರ್ಕಾರಿ ಸ್ವಾಮ್ಯದ ದೊಡ್ಡ ಬ್ಯಾಂಕ್ಗಳನ್ನು ಉತ್ತೇಜಿಸುವುದು
- 1.1 ಮಿಲಿಯನ್‌ಗಿಂತಲೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳಿಗೆ 1 ಟ್ರಿಲಿಯನ್ ಯುವಾನ್‌ಗಿಂತ ಹೆಚ್ಚಿನ ಮೂಲ ಅಥವಾ ಬಡ್ಡಿ ಪಾವತಿ ಮುಂದೂಡಿಕೆ
- ವಸಂತ ಬೇಸಾಯ ಮತ್ತು ಪಶುಸಂಗೋಪನೆ ಅಭಿವೃದ್ಧಿಗೆ ಬೆಂಬಲ