ನವದೆಹಲಿ: ಭಾರತದೊಂದಿಗೆ ಭೂ ಗಡಿಗಳನ್ನು ಹಂಚಿಕೊಳ್ಳುವ ದೇಶಗಳಿಂದ ಬರುವ ವಿದೇಶಿ ನೇರ ಹೂಡಿಕೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಭಾರತ ಸರ್ಕಾರದ ನಡೆಯನ್ನು ಚೀನಾ ಟೀಕಿಸುತ್ತಿದೆ. ಯಾವುದೇ ಜಾಗತಿಕ ವೇದಿಕೆ ಮುಂದೆ ಹೋಗಿ ಭಾರತದ ವಿರುದ್ಧ ದೂರಿದ್ದರೂ ಚೀನಾಕ್ಕೆ ಯಾವುದೇ ಪರಿಹಾರ ದೊರೆಯುವುದಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಮಾಜಿ ಕಾರ್ಯದರ್ಶಿ ಅಜಯ್ ದುವಾ ಹೇಳಿದ್ದಾರೆ.
ಕಳೆದ ವರ್ಷ ಚೀನಾ ಬೆಂಬಲಿತ ಮುಕ್ತ ವ್ಯಾಪಾರ ಒಪ್ಪಂದ ಆರ್‌ಸಿಇಪಿಯನ್ನು ಬೆಂಬಲಿಸಿದಲ್ಲಿ ಈ ಪರಿಸ್ಥಿತಿ ಭಾರತದ ಅನಾನುಕೂಲತೆಗೆ ತಿರುಗುತ್ತಿತ್ತು. ಚೀನಾದವರು ಹೂಡಿಕೆ ನಿಯಮಗಳನ್ನು ತಪ್ಪಾಗಿ ವ್ಯಾಖ್ಯಾನಿಸುತ್ತಿದ್ದಾರೆ ಎಂದು ಅಜಯ್ ಅವರು 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ.
ಎಫ್‌ಡಿಐ ಹೂಡಿಕೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಸಂಪೂರ್ಣವಾಗಿ ತಪಾಸಣೆ ಮಾಡುತ್ತವೆ ಎಂದು ಹೂಡಿಕೆ ನಿಯಮಗಳು ಹೇಳುವುದಿಲ್ಲ. ನಾವು ಹೂಡಿಕೆಯ ಬಗ್ಗೆ ‘ನಮಗೆ ತಿಳಿಸಿ’ ಎಂದು ಹೇಳುತ್ತಿದ್ದೇವೆ. ಚೀನಾದಿಂದ ಎಫ್‌ಡಿಐ ಬರುವುದನ್ನು ನಾವು ನಿಷೇಧಿಸಿಲ್ಲ ಎಂದು ಚೀನಾದ ಟೀಕೆಗಳನ್ನು ಮಾಜಿ ಅಧಿಕಾರಿ ಅಲ್ಲಗಳೆದರು.
ಶನಿವಾರ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಇಲಾಖೆ (ಡಿಪಿಐಐಟಿ), ಪತ್ರಿಕಾ ಪ್ರಕಟಣೆ ಹೊರಡಿಸಿ, ಭಾರತದೊಂದಿಗೆ ಭೂ ಗಡಿಗಳನ್ನು ಹಂಚಿಕೊಳ್ಳುವ ದೇಶಗಳಿಂದ ಬರುವ ಎಲ್ಲಾ ಎಫ್‌ಡಿಐಗಳಿಗೆ ಸರ್ಕಾರದ ಗಮನಕ್ಕೆ ತರುವುದು ಕಡ್ಡಾಯ ಎಂದು ಹೇಳಿದೆ. ಇದು ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್, ಮ್ಯಾನ್ಮಾರ್ ಮತ್ತು ಅಫ್ಘಾನಿಸ್ತಾನದಿಂದ ಬರುವ ಎಫ್‌ಡಿಐ ಮೇಲೆ ಪರಿಣಾಮ ಬೀರುತ್ತದೆ.
ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ಭಾರತ ಆಕರ್ಷಣೀಯ ಆಯ್ಕೆಯಾಗಲಿದೆ. ಭಾರತೀಯ ಕಂಪನಿಗಳ ಅವಕಾಶವಾದ ಸ್ವಾಧೀನ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಡಿಪಿಐಐಟಿ ಸ್ಪಷ್ಟನೆ ನೀಡಿದೆ. ಇದಕ್ಕೂ ಮುನ್ನ ಯಾವುದೇ ಮಾರುಕಟ್ಟೆ ಬಂಡವಾಳ ಹೂಡಿಕೆ ಪಡೆಯುವ ಭಾರತೀಯ ಬ್ಯಾಂಕ್ಗಳನ್ನು ಈ ಹೂಡಿಕೆಗಳ ಲಾಭದಾಯಕ ಮಾಲೀಕರ ವಿವರಗಳನ್ನು ಪಡೆಯಲು ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಕೋರಿದೆ.
ಚೀನಾದ ಸೆಂಟ್ರಲ್ ಬ್ಯಾಂಕ್ ಈ ತಿಂಗಳು ಎಚ್‌ಡಿಎಫ್‌ಸಿಯಲ್ಲಿ ತನ್ನ ಷೇರು ಪಾಲನ್ನು ಶೇ 1ಕ್ಕಿಂತ ಅಧಿಕ ಪ್ರಮಾಣದಲ್ಲಿ ಹೆಚ್ಚಿಸಿದ್ದರಿಂದ ಕೇಂದ್ರ ಸರ್ಕಾರ ಈ ನೀತಿಯನ್ನು ಕಾರ್ಯರೂಪಕ್ಕೆ ತಂದಿದೆ.