ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ವಿತ್ತ ಸಚಿವ/ ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ ತೀವ್ರ ವಾಗ್ದಾಳಿ ನಡೆಸಿದ್ದಾರೆ.
'ಈಟಿವಿ ಭಾರತ' ಜೊತೆ ಮಾತನಾಡಿದ ಚಿದಂಬರಂ, ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಬಿಜೆಪಿ ಸರ್ಕಾರ ಯಾವಾಗ ಅಂಗೀಕರಿಸುತ್ತದೆ? ಅವರ ವೈಫಲ್ಯ ಮತ್ತು ಅವರ ಆರ್ಥಿಕ ನಿರ್ವಾಹಕರ ವೈಫಲ್ಯವನ್ನು ಪ್ರಧಾನಿ ಯಾವಾಗ ಒಪ್ಪುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಸರಣಿ ಟ್ವೀಟ್ ಮಾಡಿದ ಚಿದಂಬರಂ, ಭಾರತದ ಎರಡು ಪ್ರಮುಖ ಕೈಗಾರಿಕೆಗಳಾದ ಟೆಲಿಕಾಂ ಮತ್ತು ವಾಯುಯಾನ ಈಗಾಗಲೇ ಬದುಕುಳಿಯಲು ಹೇಗೆ ಹೆಣಗಾಡುತ್ತಿವೆ ಎಂಬುದು ಎದ್ದು ಕಾಣುತ್ತಿದೆ. ಅದರಲ್ಲೂ ವಿಶೇಷವಾಗಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ದೇಶದ ಆರ್ಥಿಕ ಬೆಳವಣಿಗೆಯನ್ನು ಸ್ಥಗಿತಗೊಳಿಸಿದ ನಂತರ ಇನ್ನಷ್ಟು ಬಿಗಡಾಯಿಸಿದೆ ಎಂದು ಆರೋಪಿಸಿದರು.
ವೊಡಾಫೋನ್- ಐಡಿಯಾ ಲಿಮಿಟೆಡ್ ಉಲ್ಲೇಖಿಸಿದ ಚಿದಂಬರಂ, ನಮ್ಮ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದೊಂದು ಕುಸಿತದ ಹಾದಿಯಲ್ಲಿದೆ. ಸರ್ಕಾರವು ಹೆಣಗಾಡುತ್ತಿರುವ ಟೆಲಿಕಾಂ ಉದ್ಯಮವನ್ನು ಉಳಿಸುವ ಯಾವುದೇ ಯೋಜನೆಯನ್ನು ಹಾಕಿಕೊಂಡಿಲ್ಲ ಎಂಬುದನ್ನು ಅರಿತುಕೊಳ್ಳುವುದೇ ಎಂದು ಪ್ರಶ್ನಿಸಿದ್ದಾರೆ.
ವೊಡಾಫೋನ್- ಐಡಿಯಾ ಪ್ರಸ್ತುತ ಉಳಿವಿಗಾಗಿ ಹೋರಾಡುತ್ತಿವೆ. ಸರ್ಕಾರಕ್ಕೆ ಹೊಂದಾಣಿಕೆಯ ಒಟ್ಟು ಆದಾಯದ (ಎಜಿಆರ್) ಬಾಕಿ ಪಾವತಿಸಲು ಹಣ ಸಂಗ್ರಹಿಸಲು ಏದುಸಿರು ಬಿಡುತ್ತಿವೆ. ದೂರಸಂಪರ್ಕ ಇಲಾಖೆ (ಡಿಒಟಿ) ಬೇಡಿಕೆಯಂತೆ ಕಂಪನಿಯು 58,254 ಕೋಟಿ ರೂ. ಪಾವತಿಸಬೇಕಿದೆ.
ವಾಯುಯಾನ ಉದ್ಯಮವು ಭಾರೀ ನಷ್ಟವನ್ನು ಅನುಭವಿಸಿದೆ. ಸರ್ಕಾರವು ರಕ್ಷಣಾ ಯೋಜನೆಯೊಂದಿಗೆ ಹೆಜ್ಜೆ ಹಾಕದಿದ್ದಲ್ಲಿ ಪ್ರತಿಯೊಬ್ಬರೂ ಏರ್ ಇಂಡಿಯಾ ದಾರಿಯಲ್ಲಿ ಸಾಗುತ್ತಾರೆ ಎಂಬುದನ್ನು ಸರ್ಕಾರವು ಅರಿತುಕೊಳ್ಳುವುದೇ?. ಕಳೆದ 12 ತಿಂಗಳಲ್ಲಿ ಲಕ್ಷಾಂತರ ಜನರು ನಷ್ಟಕ್ಕೊಳಗಾಗಿ ಉದ್ಯೋಗ ಅಥವಾ ಜೀವನೋಪಾಯ ಕಳೆದುಕೊಂಡಿದ್ದಾರೆ. ಎರಡು ಪ್ರಮುಖ ಕೈಗಾರಿಕೆಗಳ ಕುಸಿತ-ಟೆಲಿಕಾಂ ಮತ್ತು ವಾಯುಯಾನ - ಇನ್ನೂ ಹಲವು ಸಾವಿರ ನೇರ ಮತ್ತು ಪರೋಕ್ಷ ಉದ್ಯೋಗಗಳು ವೆಚ್ಚವಾಗಲಿವೆ ಎಂದು ಬರೆದುಕೊಂಡಿದ್ದಾರೆ.