ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಉತ್ಪನ್ನಗಳನ್ನು ತರುವ ಕುರಿತು ಚರ್ಚೆಗೆ ಸರ್ಕಾರ ಮುಕ್ತವಾಗಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ ಠಾಕೂರ್ ಹೇಳಿದ್ದಾರೆ.
ಇಂಧನವನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತರುವುದು ಜಿಎಸ್‌ಟಿ ಕೌನ್ಸಿಲ್ ಸದಸ್ಯರ ಮೇಲೆ ಅವಲಂಬಿತವಾಗಿದೆ ಎಂದು ಠಾಕೂರ್ ಸಂಸತ್ತಿನ ಹೊರಗೆ ಮಾಧ್ಯಮ ಜತೆ ಮಾತನಾಡುತ್ತ ಹೇಳಿದ್ದಾರೆ.
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಾಖಲೆಯ ಮಟ್ಟದಲ್ಲಿ ಏರಿಕೆಯಾಗುತ್ತಿವೆ. ತೆರಿಗೆಗಳೇ ಬಹುಪಾಲು ವೆಚ್ಚ ಹೊಂದಿವೆ. ನಾಲ್ಕು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನ ಸಭಾ ಚುನಾವಣೆ ನಡೆಯುತ್ತಿರುವುದರಿಂದ ಸತತ 11ನೇ ದಿನವೂ ಚಿಲ್ಲರೆ ಇಂಧನ ದರ ಯಥಾವತ್ತಾಗಿ ಉಳಿದಿದೆ.
ಇದನ್ನೂ ಓದಿ: ಆದಾಯ ಕೊರತೆ ಅನುದಾನ: ರಾಜ್ಯಗಳಿಗೆ 74,340 ಕೋಟಿ ರೂ. ಕೊಟ್ಟ ಕೇಂದ್ರ
ರಾಜ್ಯಸಭೆಯಲ್ಲಿನ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಸಚಿವರು, ಜಿಎಸ್‌ಟಿ ಕೌನ್ಸಿಲ್ ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‌ಟಿಯಡಿ ಇರಿಸಲು ಇದುವರೆಗೆ ಶಿಫಾರಸು ಮಾಡಿಲ್ಲ ಎಂದು ಹೇಳಿದರು.
ಸಿಜಿಎಸ್ಟಿ ಕಾಯ್ದೆಯ ಸೆಕ್ಷನ್ 9 (2)ರ ಪ್ರಕಾರ, ಈ ಉತ್ಪನ್ನಗಳನ್ನು ಜಿಎಸ್ಟಿಯಲ್ಲಿ ಸೇರಿಸಲು ಜಿಎಸ್‌ಟಿ ಕೌನ್ಸಿಲ್ನ ಶಿಫಾರಸು ಅಗತ್ಯವಿರುತ್ತದೆ. ಜಿಎಸ್‌ಟಿ ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸೇರ್ಪಡೆ ಮಾಡಲು ತೆರಿಗೆ ಮಂಡಳಿ ಇಲ್ಲಿಯವರೆಗೆ ಯಾವುದೇ ಶಿಫಾರಸು ಮಾಡಿಲ್ಲ ಎಂದು ಠಾಕೂರ್ ಹೇಳಿದರು.