ನವದೆಹಲಿ: ಲಾಕ್‌ಡೌನ್ ಸಮಯದಲ್ಲಿ ಜನತೆಗೆ ಆಹಾರ ಧಾನ್ಯಗಳ ಪೂರೈಕೆ ಒದಗಿಸುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ. 80 ಕೋಟಿ ಫಲಾನುಭವಿಗಳಿಗೆ ಪಡಿತರ ಅಂಗಡಿಗಳ ಮೂಲಕ ಮಾಸಿಕ ಸಬ್ಸಿಡಿ ಆಹಾರ ಧಾನ್ಯಗಳ ಪ್ರತಿ ಕೋಟಾವನ್ನು 2 ಕೆಜಿಯಿಂದ 7 ಕೆಜಿಗೆ ಹೆಚ್ಚಿಸಲು ಕೇಂದ್ರಬುಧವಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು (ಸಿಸಿಇಎ) ಈ ತೀರ್ಮಾನಕ್ಕೆ ಅನುಮೋದನೆ ನೀಡಿದೆ.
ವಿಶ್ವದ ಅತಿದೊಡ್ಡ ಆಹಾರ ಭದ್ರತಾ ವ್ಯವಸ್ಥೆಯಾದ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ 80 ಕೋಟಿ ಜನರಿಗೆ 7 ಕೆ.ಜಿ. ಆಹಾರ ಧಾನ್ಯ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಸಭೆಯ ನಂತರ ಮಾಧ್ಯಮಗಳಿಗೆ ತಿಳಿಸಿದರು.
ಗೋಧಿಯ ಬೆಲೆ ಕೆಜಿಗೆ 27 ರೂ. ಇದ್ದು ಸಬ್ಸಿಡಿ ದರದಲ್ಲಿ 2 ರೂ. ದರದಲ್ಲಿ ಪ್ರತಿ ಕೆ.ಜಿ ನೀಡಲಾಗುವುದು. ಅಕ್ಕಿಯ ಬೆಲೆ ಕೆಜಿಗೆ 32 ರೂ. ಇದ್ದು, ಪಡಿತರ ಅಂಗಡಿಗಳ ಮೂಲಕ ಕೆಜಿಗೆ 3 ರೂ. ದರದಲ್ಲಿ ಒದಗಿಸಲಾಗುತ್ತದೆ.
ಎಲ್ಲ ರಾಜ್ಯಗಳಿಗೆ ಪಿಡಿಎಸ್ ಮೂಲಕ ಕೇಂದ್ರದಿಂದ ಆಹಾರ ಧಾನ್ಯಗಳನ್ನು ಮುಂಚಿತವಾಗಿ ತೆಗೆದುಕೊಳ್ಳಲು ಸೂಚನೆ ರವಾನಿಸಲಾಗಿದೆ ಎಂದರು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ (ಎನ್‌ಎಫ್‌ಎಸ್‌ಎ) 80 ಕೋಟಿ ಜನರಿಗೆ ಸಬ್ಸಿಡಿ ದರದಲ್ಲಿ ಸರ್ಕಾರವು ತಿಂಗಳಿಗೆ 5 ಕೆ.ಜಿ. ಆಹಾರ ಧಾನ್ಯಗಳನ್ನು ಪೂರೈಸುತ್ತಿದೆ.
ಸರ್ಕಾರಿ ಸ್ವಾಮ್ಯದ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) ಗೋಧಿ ಮತ್ತು ಅಕ್ಕಿ ದಾಸ್ತಾನು ಹೊಂದಿದ್ದು, ಪಿಡಿಎಸ್ ಮೂಲಕ ಹೆಚ್ಚುವರಿ ಆಹಾರ ಧಾನ್ಯಗಳನ್ನು ಹಂಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆಲವು ಆಹಾರ ಧಾನ್ಯಗಳ ದಾಸ್ತಾನು ತೆರೆದ ಜಾಗದಲ್ಲಿ ಇರುವುದರಿಂದ, ಮಾನ್ಸೂನ್‌ಗೆ ಮುಂಚಿತವಾಗಿ ಸ್ಟಾಕ್ ಖಾಲಿ ಮಾಡುವ ಒತ್ತಡದಲ್ಲಿ ಎಫ್‌ಸಿಐ ಇದೆ.