ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯ ಸಾಮರ್ಥ್ಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ದೃಷ್ಟಿಯಿಂದ ಉದ್ಯಮಿಗಳಿಗೆ ಹೊಸ ಘಟಕಗಳನ್ನು ಸ್ಥಾಪಿಸಲು ಉತ್ತೇಜಿಸಲು ಬಜೆಟ್‌ನಲ್ಲಿ ಹೆಚ್ಚಿನ ಹಣ ವಿನಿಯೋಗಿಸುವ ಮುಖೇನ ಮೂಲಸೌಕರ್ಯ ಅಭಿವೃದ್ಧಿಯನ್ನು ತ್ವರಿತಗತಿಯಲ್ಲಿ ಮುನ್ನಡೆಸುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬ್ಯಾಂಕರ್ಗಳು ಸಲಹೆ ನೀಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಎನ್‌ಎಸ್‌ಒ ಅಂಕಿ - ಅಂಶಗಳ ಪ್ರಕಾರ, ಮುಂಗಡ ಅಂದಾಜಿನಂತೆ ಈ ವರ್ಷದ ಮಾರ್ಚ್‌ನಲ್ಲಿ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ 7.7ರಷ್ಟು ಕುಗ್ಗುವ ನಿರೀಕ್ಷೆಯಿದೆ.
ವಿಶ್ವಾದ್ಯಂತ 2.16 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಕೊರೊನಾ ವೈರಸ್ ನಿಯಂತ್ರಿಸಲು ಲಾಕ್ಡೌನ್ ಹೇರಲಾಗಿತ್ತು. ತತ್ಪರಿಣಾಮ ವಿಶ್ವದಾದ್ಯಂತ ಲಕ್ಷಾಂತರ ಜನರ ಜೀವನ ಮತ್ತು ಜೀವನೋಪಾಯ ಧ್ವಂಸಗೊಳಿಸಿದೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಫೆಬ್ರವರಿ 1ರಂದು ಮೊದಲ ಬಜೆಟ್ ಮಂಡಿಸಲಿದೆ.
ಸಾಂಕ್ರಾಮಿಕ ರೋಗದ ವ್ಯತಿರಿಕ್ತ ಆರ್ಥಿಕ ಪರಿಣಾಮ ಎದುರಿಸಲು ಹಣಕಾಸು ಸಚಿವೆ ಸೀತಾರಾಮನ್ ಕಳೆದ ವರ್ಷ ಮೇ ತಿಂಗಳಲ್ಲಿ 20 ಲಕ್ಷ ಕೋಟಿ ರೂ. ಆತ್ಮನಿರ್ಭರ ಭಾರತ ಪ್ಯಾಕೇಜ್ ಘೋಷಿಸಿದ್ದರು. ಉತ್ಪಾದನೆಯನ್ನು ಪ್ರಾರಂಭಿಸಲು ಉದ್ಯಮಕ್ಕೆ ಸುಲಭ ಸಾಲ ಒದಗಿಸಿತು.
ಅರ್ಥಶಾಸ್ತ್ರಜ್ಞರು ಮತ್ತು ಬ್ಯಾಂಕರ್ಗಳು ಮುಂಬರುವ ಬಜೆಟ್‌ನಲ್ಲಿ ಬೇಡಿಕೆಯನ್ನು ಉತ್ತೇಜಿಸದೆ ಪೂರೈಕೆ ಭಾಗವನ್ನು ಹೆಚ್ಚಿಸುವ ತಂತ್ರವನ್ನು ಅನುಸರಿಸದಂತೆ ಸಲಹೆ ನೀಡಿದ್ದಾರೆ.
ಬಜೆಟ್ ಆರ್ಥಿಕತೆಯ ಚಾಲನ ಶಕ್ತಿಯಾಗಲಿ: ಕಣ್ಣನ್
ಬ್ಯಾಂಕ್ಗಳಿಗೆ ಸಾಲ ನೀಡುವಂತೆ ಕೇಳಬೇಡಿ. ಮೂಲಸೌಕರ್ಯಗಳ ಮೇಲಿನ ವೆಚ್ಚ ಹೆಚ್ಚಳ ಮಾಡಿ. ಬಜೆಟ್ ಆರ್ಥಿಕತೆಯ ಚಾಲನ ಶಕ್ತಿಯಾಗುವ ದೃಷ್ಟಿಯನ್ನು ಇರಿಸಿಕೊಂಡು ಮಂಡನೆಯಾಗಬೇಕು. ಇದರಿಂದ ಸಾಲ ನೀಡುವಂತೆ ಬ್ಯಾಂಕ್ಗಳನ್ನು ಕೇಳುವಂತಹ ಅಗತ್ಯವೇ ಇರುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ ವಿ.ಜಿ.ಕಣ್ಣನ್ ಹೇಳಿದರು.
ಇದನ್ನೂ ಓದಿ: ಕೇಂದ್ರದ ಪ್ರಗತಿ ಈಗ ಬಯಲು: 450 ಯೋಜನೆಗಳ ವಿಳಂಬಕ್ಕೆ ₹ 4.28 ಲಕ್ಷ ಕೋಟಿ ಹೆಚ್ಚುವರಿ ಹೊರೆ!
ಉದ್ಯಮವನ್ನು ಮತ್ತು ಹೊಸ ಘಟಕಗಳನ್ನು ಸ್ಥಾಪಿಸಲು ಜನರನ್ನು ಪ್ರೋತ್ಸಾಹಿಸುವುದು ಹೇಗೆ ಎಂಬುದರ ಬಗ್ಗೆ ಪ್ರಶ್ನೆಹಾಕಿಕೊಳ್ಳಬೇಕು. ತೆರಿಗೆ ಪರಿಹಾರದಲ್ಲಿ ನಾವು ಅವರಿಗೆ ಒಂದು ರೀತಿಯ ಪ್ರಯೋಜನ ನೀಡಬೇಕು. ಸಾಮರ್ಥ್ಯ ವರ್ಧನೆ ಮತ್ತು ಸಾಮರ್ಥ್ಯ ವಿಸ್ತರಣೆಗೆ ಕೆಲವು ವಿಭಾಗದಲ್ಲಿ ಪ್ರೋತ್ಸಾಹ ನೀಡಬೇಕು ಎಂದು ನೀತಿ ಥಿಂಕ್ ಟ್ಯಾಂಕ್ ಇಗ್ರೋ ಫೌಂಡೇಷನ್ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಈಟಿವಿ ಭಾರತ ಕೇಳಿದ ಪ್ರಶ್ನೆಗೆ ಕಣ್ಣನ್ ಉತ್ತರಿಸಿದರು.
ಅಸಮರ್ಪಕ ಬಂಡವಾಳ ವೆಚ್ಚ
ಈ ವರ್ಷದ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಮಾಹಿತಿಯ ಪ್ರಕಾರ, 2018-19ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಬಂಡವಾಳ ವೆಚ್ಚ 2.94 ಲಕ್ಷ ಕೋಟಿ ರೂ.ಯಷ್ಟಿತ್ತು.
2019-20ನೇ ಸಾಲಿನ ಪರಿಷ್ಕೃತ ಅಂದಾಜಿನ ಪ್ರಕಾರ, ಬಂಡವಾಳ ವೆಚ್ಚ 3.41 ಲಕ್ಷ ಕೋಟಿ ರೂ. ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ (2020-21) ಬಂಡವಾಳ ವೆಚ್ಚ 4.02 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಪ್ರಸಕ್ತ ವರ್ಷದ ಬಂಡವಾಳ ವೆಚ್ಚದ ಅಂದಾಜಿತ ವರ್ಷದ ಒಟ್ಟು ಬಜೆಟ್‌ನ ಕೇವಲ ಶೇ 13.21ರಷ್ಟಾಗಿದೆ. ಇದು 30.42 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆದರೆ, ಈಗಿನ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಇದು ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.
ಮುಂದಿನ ಐದು ವರ್ಷಗಳಲ್ಲಿ 100 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ರೂಪಿಸುವ ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ (ಎನ್‌ಐಪಿ) ಉಲ್ಲೇಖಿಸಿದ ಕಣ್ಣನ್, ಮೂಲಸೌಕರ್ಯ ಅಭಿವೃದ್ಧಿಯನ್ನು ಶೀಘ್ರ ಜಾರಿ ಬಗ್ಗೆ ಸಾಕಷ್ಟು ಮಾತುಕತೆ ನಡೆಯುತ್ತಿದ್ದು, ಇದನ್ನು ಇನ್ನಷ್ಟು ವೇಗಗೊಳಿಸಬೇಕಾಗಿದೆ. ಅದು ವೇಗವಾಗಿ ಚಾಲನೆಗೊಂಡರೆ ಆರ್ಥಿಕತೆಯನ್ನು ಮತ್ತಷ್ಟು ವೇಗವಾಗುವಂತೆ ಮಾಡಬಲ್ಲದು ಎಂದರು.
ವಸತಿ, ಮೂಲಸೌಕರ್ಯ ಅಭಿವೃದ್ಧಿ ನಿರ್ಣಾಯಕ: ಚರಣ್ ಸಿಂಗ್
ಆರ್ಥಿಕ ಬೆಳವಣಿಗೆ ಮೂಲಸೌಕರ್ಯ ಮತ್ತು ವಸತಿ ವಲಯದಿಂದ ಬರಲಿದೆ ಎಂದು ಇಗ್ರೋ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಾಹಕ ಡಾ.ಚರಣ್ ಸಿಂಗ್ ಹೇಳಿದ್ದಾರೆ.
ಬೆಳವಣಿಗೆ ಎಲ್ಲಿಂದ ಬರುತ್ತದೆ? ಇದು ಮೂಲಸೌಕರ್ಯ ಮತ್ತು ವಸತಿಗಳಿಂದ ಬರಲಿದೆ. ವಸತಿ ವಲಯ 275 ಕೈಗಾರಿಕೆಗಳಿಗೆ ಸಂಬಂಧಿಸಿದೆ. ಕೈಗೆಟುಕುವ ವಸತಿಗಾಗಿ ನೀವು ದೊಡ್ಡ ಉತ್ತೇಜನ ನೀಡಿದರೆ, ದೇಶದ 275 ಕೈಗಾರಿಕೆಗಳು ಪ್ರಯೋಜನ ಪಡೆಯುತ್ತವೆ ಎಂದು ಚರಣ್ ಸಿಂಗ್ ಈಟಿವಿ ಭಾರತಗೆ ತಿಳಿಸಿದರು.
ಇದು ದೊಡ್ಡ ಪ್ರಮಾಣ ಪರಿಣಾಮ ಉಂಟುಮಾಡಲಿದೆ. ಇದೊಂದು ಶ್ರಮದಾಯಕವಾಗಿದ್ದು, ಹಲವಾರು ಇತರ ಕೈಗಾರಿಕೆಗಳಿಗೆ ಅನೇಕ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಸಿಮೆಂಟ್ ಮತ್ತು ಸ್ಟೀಲ್ ಉದ್ಯಮ ವ್ಯಾಪಕ ಬೆಂಬಲ ಪಡೆದುಕೊಳ್ಳಲಿದೆ ಎಂದರು.