ನವದೆಹಲಿ: ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಬಿಹಾರವು 2019-20ರಲ್ಲಿ ತಲಾ ಆದಾಯದಲ್ಲಿ ಅತಿ ಹೆಚ್ಚಿನ ಬೆಳವಣಿಗೆ ದಾಖಲಿಸಿದೆ ಎಂದು ಸಂಸತ್ತಿನಲ್ಲಿ ಸರ್ಕಾರ ತಿಳಿಸಿದೆ.
ಸರ್ಕಾರದ ಅಂದಾಜಿನ ಪ್ರಕಾರ, ವರ್ಷದ ಹಿಂದಿನ ಮಟ್ಟಕ್ಕೆ ಹೋಲಿಸಿದರೆ 2019-20ರಲ್ಲಿ ಬಿಹಾರದ ತಲಾ ಆದಾಯವು ಶೇ 9.13ರಷ್ಟು ಏರಿಕೆಯಾಗಿದೆ. ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನದ ರಾಜ್ಯ ಸಚಿವ ರಾವ್ ಇಂದರ್ಜಿತ್ ಸಿಂಗ್ ಅವರು ಈ ಮಾಹಿತಿ ಬಹಿರಂಗಪಡಿಸಿದ್ದಾರೆ.
ಬಿಹಾರ ಹೊರತಾಗಿ 2019-20ರಲ್ಲಿ ತಮಿಳುನಾಡಿನ ತಲಾ ಆದಾಯವು ಶೇ 7.63ರಷ್ಟು ಹಾಗೂ ಆಂಧ್ರಪ್ರದೇಶದ ಆದಾಯವು ಶೇ 7.55ರಷ್ಟು ಏರಿಕೆಯಾಗಿದೆ. ಉತ್ತರ ಪ್ರದೇಶವು ತಲಾ ಆದಾಯದಲ್ಲಿ ಅತ್ಯಂತ ಕಡಿಮೆ ಬೆಳವಣಿಗೆಯ ದರವಾದ ಶೇ 2.76ರಷ್ಟು ದಾಖಲಿಸಿದೆ. 2019-20ರಲ್ಲಿ ರಾಜಸ್ಥಾನದ ತಲಾ ಆದಾಯವು ಶೇ 3.54ರಷ್ಟು ಹೆಚ್ಚಾಗಿದ್ದರೆ. ಆದರೆ ಛತ್ತೀಸ್‌ಗಢದ ಬೆಳವಣಿಗೆಯ ದರವು ಶೇ 3.51ರಷ್ಟಿದೆ.
ಇತರ ಪ್ರಮುಖ ರಾಜ್ಯಗಳಲ್ಲಿ 2019-20ರ ವೇಳೆ ಪಂಜಾಬ್‌ನ ತಲಾ ಆದಾಯದ ಬೆಳವಣಿಗೆಯ ದರವು 4.04ರಷ್ಟಿದ್ದರೆ, ದೆಹಲಿ ಶೇ 5.24ರಷ್ಟು, ಕರ್ನಾಟಕ ಶೇ 5.65ರಷ್ಟು ಮತ್ತು ತೆಲಂಗಾಣ ಶೇ 7.18ರಷ್ಟಿದೆ. ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳ ತಲಾ ಆದಾಯದ ಅಂಕಿಅಂಶ ಲಭ್ಯವಿಲ್ಲ ಎಂದು ಸಚಿವರು ನೀಡಿದ ದಾಖಲೆ ತಿಳಿಸುತ್ತವೆ.
2010-11ರಲ್ಲಿ 62,170 ರೂ.ಗಳಿಗೆ ಹೋಲಿಸಿದರೆ ಭಾರತದ ಒಟ್ಟಾರೆ ತಲಾ ಆದಾಯವು 2019-20ರಲ್ಲಿ 94,954 ರೂ.ಗಳಿಗೆ ಏರಿಕೆಯಾಗಿದೆ. ಇದು ಕಳೆದ 10 ವರ್ಷಗಳ ಅವಧಿಯಲ್ಲಿ ಸುಮಾರು ಶೇ 53ರಷ್ಟು ಸ್ಥಿರವಾದ ಬೆಳವಣಿಗೆ ಸಾಧಿಸಿದೆ ಎಂದು ಸಿಂಗ್ ತಿಳಿಸಿದ್ದಾರೆ.
ತಲಾ ಆದಾಯವು ಒಂದು ದೇಶ ಅಥವಾ ಭೌಗೋಳಿಕ ಪ್ರದೇಶದಲ್ಲಿ ಪ್ರತಿ ವ್ಯಕ್ತಿ ಗಳಿಸಿದ ಹಣದ ಮಾಪನವಾಗಿದೆ. ತಲಾ ಆದಾಯವನ್ನು ಒಂದು ಪ್ರದೇಶದ ಸರಾಸರಿ ವ್ಯಕ್ತಿಯ ಆದಾಯವನ್ನು ನಿರ್ಧರಿಸಲಾಗುತ್ತದೆ. ಜನಸಂಖ್ಯೆಯ ಜೀವನ ಮಟ್ಟ ಮತ್ತು ಜೀವನದ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು ಬಳಸಬಹುದು.