ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೀಪಾವಳಿಗೂ ಮುನ್ನ ಬಹುನಿರೀಕ್ಷಿತ ಮತ್ತೊಂದು ಸುತ್ತಿನ 2.65 ಲಕ್ಷ ಕೋಟಿ ರೂ. ಮೊತ್ತದ ಉತ್ತೇಜಕ ಪ್ಯಾಕೇಜ್ ಘೋಷಿಸಿದ್ದಾರೆ.
ಆಯ್ದ 10 ಪ್ರಮುಖ ಉತ್ಪಾದನಾ ಕ್ಷೇತ್ರಗಳಿಗೆ 2 ಲಕ್ಷ ಕೋಟಿ ರೂ. ಪಿಎಲ್ಐ ಯೋಜನೆಯಡಿ ನೂತನ ಉತ್ಪಾದನಾ ಪ್ರೋತ್ಸಾಹಕ ಘೋಷಿಸಿದ ಒಂದು ದಿನದ ನಂತರ ಈ ಘೋಷಣೆ ಹೊರಬಿದ್ದಿದೆ. ಹಣಕಾಸು ಸಚಿವಾಲಯವು ವಲಯವಾರು ನಿರ್ದಿಷ್ಟ ಕ್ರಮಗಳನ್ನು ರೂಪಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ಕ್ಷೇತ್ರಗಳಿಗೆ ಆದ್ಯತೆ ನೀಡಲಿದೆ.
ಮೇ ತಿಂಗಳಲ್ಲಿ ದೇಶವ್ಯಾಪಿ 3ನೇ ಹಂತದ ಲಾಕ್ಡೌನ್ ಅಂತ್ಯಕ್ಕೆ ಕೆಲ ದಿನಗಳು ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿ, ಆತ್ಮನಿರ್ಭರ ಭಾರತದಡಿ ಒಟ್ಟು ಜಿಡಿಪಿಯ ಶೇ 10ರಷ್ಟು ಅಂದಾಜು 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ಈ ಬಳಿಕ ಕ್ಷೇತ್ರವಾರು ಹಂಚಿಕೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದರು. ಕಳೆದ ಎರಡು ತಿಂಗಳಿಂದ ಬಹು ನಿರೀಕ್ಷೆಯಲ್ಲಿದ್ದ ಪ್ಯಾಕೇಜ್ ಹೊರ ಬಿದ್ದಿದೆ. ಇದರ ಮೊತ್ತ 2.65 ಲಕ್ಷ ಕೋಟಿ ರೂ.ಯಷ್ಟಿದೆ.
ಆಯ್ದ 10 ಕ್ಷೇತ್ರಗಳಲ್ಲಿ ಮುಂದಿನ ಐದು ವರ್ಷಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು 27 ಬಿಲಿಯನ್ ಡಾಲರ್ (2 ಲಕ್ಷ ಕೋಟಿ ರೂ.) ಹೂಡಿಕೆಗೆ ಕೇಂದ್ರ ಸಚಿವ ಸಂಪುಟ ಬುಧವಾರವಷ್ಟೆ ಅನುಮೋದನೆ ನೀಡಿದೆ. ಈ ಉತ್ಪಾದನಾ ಸಂಬಂಧಿತ ಘೋಷಣೆಯಂತೆ ಈ ಪ್ಯಾಕೇಜ್ ಅನುಸರಿಸುತ್ತದೆ. ಉದ್ಯೋಗ ಸೃಷ್ಟಿಯತ್ತ ಗಮನ ಇಟ್ಟುಕೊಂಡು, ತೀವ್ರ ಒತ್ತಡಕ್ಕೆ ಒಳಗಾದ ಕ್ಷೇತ್ರಗಳತ್ತ ಆದ್ಯತೆ ನೀಡಲಾಗುತ್ತಿದೆ.
ಇಂದಿನ 2,65,080 ಕೋಟಿ ರೂ. ಉತ್ತೇಜಕ ಪ್ಯಾಕೇಜ್ ಸೇರಿ ಒಟ್ಟಾರೆ ಮೊತ್ತ 29,87,641 ರೂ.ಯಷ್ಟಾಗಿದೆ. ದೇಶದ ಒಟ್ಟಾರೆ ಜಿಡಿಪಿಯ ಪೈಕಿ ಶೇ 15ರಷ್ಟು ಕೋವಿಡ್ ಪ್ರೇರೇಪಿತ ಆರ್ಥಿಕ ಚೇತರಿಕೆಯ ಪ್ಯಾಕೇಜ್ ಆಗಿದೆ.
ಲಸಿಕೆಗಾಗಿ ಸಂಶೋಧನೆ ಮತ್ತು ಅಭಿವೃದ್ಧಿಗೆ 900 ಕೋಟಿ ರೂ. ನೀಡಲಾಗಿದೆ. ಈ ಹಣವು ಸಂಶೋಧನಾ ಉದ್ದೇಶಗಳಿಗಾಗಿ ಜೈವಿಕ ತಂತ್ರಜ್ಞಾನ ವಿಭಾಗಕ್ಕೆ ಹೋಗುತ್ತದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ರೋಜಗಾರ್ ಯೋಜನೆಗೆ 10,000 ಕೋಟಿ ರೂ. ಹಣ ಮೀಸಲಿಟ್ಟು, ಇದನ್ನು ಎಂಜಿಎನ್‌ಆರ್‌ಇಜಿಎ ಅಥವಾ ಗ್ರಾಮ ಸಡಕ್ ಯೋಜನೆಗೆ ಬಳಸಬಹುದು. ಇದು ಗ್ರಾಮೀಣ ಆರ್ಥಿಕತೆ ವೇಗಗೊಳಿಸಲು ಸಹಾಯ ಮಾಡುತ್ತದೆ.
ದೇಶೀಯ ರಕ್ಷಣಾ ಸಲಕರಣೆಗಳ ಉತ್ಪಾದಕ, ಕೈಗಾರಿಕಾ ಖರ್ಚು, ಹಸಿರು ಇಂಧನ ವಲಯ ಇತ್ಯಾದಿಗಳಿಗೆ 10,200 ಕೋಟಿ ರೂ ಹೆಚ್ಚುವರಿ ವಿನಿಯೋಗ ಮಾಡಿದೆ. ಆರೋಗ್ಯ ಕ್ಷೇತ್ರ ಹಾಗೂ ಕೋವಿಡ್ ಕಾರಣದಿಂದ ತೀವ್ರ ಒತ್ತಡಕ್ಕೆ ಒಳಗಾದ 26 ವಲಯಗಳಿಗೆ ಸಾಲ ಖಾತರಿ ಬೆಂಬಲ ಯೋಜನೆ ಪ್ರಾರಂಭಿಸಲಾಗಿದೆ. ಈ ಉದ್ಯಮಗಳು ಶೇ 20ರಷ್ಟರವರೆಗೆ ಹೆಚ್ಚುವರಿ ಸಾಲ ಪಡೆಯುತ್ತವೆ. ಮರುಪಾವತಿಯನ್ನು ಐದು ವರ್ಷಗಳ ಅವಧಿಯಲ್ಲಿ ಮಾಡಬಹುದು.
2020ರ ಸೆಪ್ಟೆಂಬರ್‌ನಲ್ಲಿ ಆರ್‌ಬಿಐ ನೇಮಿಸಿದ ಕಾಮತ್ ಸಮಿತಿಯು ವಿದ್ಯುತ್, ನಿರ್ಮಾಣ, ಕಬ್ಬಿಣ ಮತ್ತು ಉಕ್ಕು, ರಸ್ತೆ, ರಿಯಲ್ ಎಸ್ಟೇಟ್, ಸಗಟು ವ್ಯಾಪಾರ, ಜವಳಿ, ಗ್ರಾಹಕ ವಸ್ತುಗಳು, ವಾಯುಯಾನ, ಲಾಜಿಸ್ಟಿಕ್ಸ್, ಪ್ರವಾಸೋದ್ಯಮ, ಹೋಟೆಲ್, ರೆಸ್ಟೋರೆಂಟ್‌ಗಳಂತಹ ಕೋವಿಡ್‌ನಿಂದ ನೇರವಾಗಿ ಬಾಧಿತವಾದ 26 ಕ್ಷೇತ್ರಗಳನ್ನು ಗುರುತಿಸಿತ್ತು.