ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಆರು ವರ್ಷಗಳ ಹಿಂದಿನ ಕನಿಷ್ಠ ಮಟ್ಟವಾದ ಶೇ 4.5ಕ್ಕೆ ಇಳಿದಿದ್ದು, ಸಾಲ ವಿತರಣೆಯು ಆರು ದಶಕಗಳ ಹಿಂದಿನ ಕನಿಷ್ಠ ಮಟ್ಟವಾದ ಶೇ 6.5ರಿಂದ ಶೇ 7ರಷ್ಟು ಕುಸಿಯಲಿದೆ ಎಂದು ವರದಿಯೊಂದು ತಿಳಿಸಿದೆ.
ಹಿಂದಿನ ಹಣಕಾಸು ವರ್ಷದಲ್ಲಿ ಸಾಲದ ಬೆಳವಣಿಗೆಯು ಶೇ 13.3ರಷ್ಟು ಹೆಚ್ಚಾಗಿದೆ ಎಂದು ರೇಟಿಂಗ್ ಏಜೆನ್ಸಿ ಇಕ್ರಾ ((ಐಸಿಆರ್ಎ)) ತನ್ನ ವರದಿಯಲ್ಲಿ ತಿಳಿಸಿದೆ.
ಇಕ್ರಾ ಮುನ್ಸೂಚನೆಯು ನಿಜವೆಂದು ತಿಳಿದು ಬಂದರೆ, ಆರ್‌ಬಿಐ ವೆಬ್‌ಸೈಟ್‌ನಲ್ಲಿನ ವಾರ್ಷಿಕ ಸಾಲ ಬೆಳವಣಿಗೆಯ ದತ್ತಾಂಶದ ಪ್ರಕಾರ; 1962ರ ಹಣಕಾಸು ವರ್ಷದಲ್ಲಿನ (ಪಂಡಿತ್ ಜವಾಹರಲಾಲ್ ನೆಹರೂ ಆಡಳಿತ ಅವಧಿ) 58 ವರ್ಷಗಳ ಹಿಂದಿನ ಸಾಲದ ಬೆಳವಣಿಗೆಯಾದ ಶೇ 5.4ಕ್ಕೆ ತಲುಪಿದಂತಾಗಲಿದೆ.
ಜಿಡಿಪಿ ಬೆಳವಣಿಗೆಯು ಎರಡನೇ ತ್ರೈಮಾಸಿಕದಲ್ಲಿ 25 ತ್ರೈಮಾಸಿಕಗಳ ಕನಿಷ್ಠ ಮಟ್ಟವಾದ ಶೇ 4.5ಕ್ಕೆ ತಲುಪಿದೆ. ಮೊದಲ ತ್ರೈಮಾಸಿಕದಲ್ಲಿ ಶೇ 5ಕ್ಕೆ ಇಳಿದಿದೆ. ಈ ಅಂಕಿಸಂಖ್ಯೆಗಳು ಮುಂದೆ ಹೋಗುಲಿವೆ ಎಂಬುದನ್ನು ಯಾರೂ ಊಹಿಸುವುದಿಲ್ಲ.
ಆರ್‌ಬಿಐ ಸಹ ತನ್ನ ಬೆಳವಣಿಗೆಯ ಮುನ್ಸೂಚನೆಯನ್ನು ಶೇ 5ಕ್ಕೆ ಇಳಿಸಿದೆ. ಅನೇಕ ಅಂತಾರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಸಹ 2020ರ ಹಣಕಾಸು ವರ್ಷದ ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಕೆಳಕ್ಕೆ ಪರಿಷ್ಕರಿಸಿವೆ. ಮೂಡಿಸ್ ತನ್ನ ಜಿಡಿಪಿ ಬೆಳವಣಿಗೆಯನ್ನು ಶೇ 5.8ರಿಂದ ಶೇ 4.9ಕ್ಕೆ ತಗ್ಗಿಸಿದೆ. ಜಪಾನಿನ ಏಜೆನ್ಸಿ ನೋಮುರಾ ಶೇ 4.6ರಲ್ಲಿ ಇರಲಿದೆ ಎಂದು ನಿರೀಕ್ಷಿಸಿದೆ.
ನವೆಂಬರ್ ಅಂತ್ಯದವರೆಗಿನ ಆರ್‌ಬಿಐ ಅಂಕಿಅಂಶಗಳ ಪ್ರಕಾರ, ಸಾಲದ ಬೆಳವಣಿಗೆಯು ಶೇ 8ಕ್ಕಿಂತ ಕಡಿಮೆ ಇದೆ ಎಂದು ಸೂಚಿಸಿವೆ. ಈ ವಿತ್ತೀಯ ವರ್ಷದಲ್ಲಿ ಸಾಲದ ಬೆಳವಣಿಗೆಯು ಸ್ಥಗಿತವಾದ ಕಾರಣದಿಂದ ಮುಂಗಡದಲ್ಲಿ ದುರ್ಬಲ ಬೆಳವಣಿಗೆ ಕಂಡುಬರುತ್ತದೆ ಎಂದು ಇಕ್ರಾ ಸಂಸ್ಥೆ ಹೇಳಿದೆ.
ಸ್ಥಗಿತವಾದ ಆರ್ಥಿಕ ಬೆಳವಣಿಗೆ, ಕಡಿಮೆಯಾದ ಕಾರ್ಯನಿರತ ಬಂಡವಾಳದ ಅವಶ್ಯಕತೆ ಮತ್ತು ಸಾಲದಾತರಲ್ಲಿ ಅಪಾಯದಂತಹ ಮುಂತಾದ ಅಂಶಗಳು 2020 ರ ಹಣಕಾಸು ವರ್ಷದಲ್ಲಿ ಸಾಲದ ಬೆಳವಣಿಗೆಯನ್ನು ಕುಗ್ಗಿಸುತ್ತದೆ. ನಾಲ್ಕು ಪ್ರಮುಖ ಕ್ಷೇತ್ರಗಳ ಪೈಕಿ ಮೂರು ವಲಯಗಳಲ್ಲಿ ಹಣಕ್ಕೆ ತುಂಬ ಕಡಿಮೆ ಬೇಡಿಕೆಯಿದೆ (ಕೃಷಿ, ಕೈಗಾರಿಕೆ, ಸೇವೆ ಮತ್ತು ಚಿಲ್ಲರೆ ಸಾಲಗಳು) ಎಂದು ವರದಿ ತಿಳಿಸಿದೆ.
ಡಿಸೆಂಬರ್ 6ರವರೆಗೆ ಸಾಲದ ಬೆಳವಣಿಗೆ 80,000 ಕೋಟಿ ರೂ.ಗಳಿಂದ 98,001 ಕೋಟಿ ರೂ.ಗೆ ಏರಿಕೆಯಾಗಿದೆ. ಇದೇ ಅವಧಿಯ ಈ ಹಿಂದಿನ 2019 ಮತ್ತು 2018ರ ಹಣಕಾಸು ವರ್ಷಗಳಲ್ಲಿ 5.4 ಲಕ್ಷ ಕೋಟಿ ರೂ. ಮತ್ತು 1.7 ಲಕ್ಷ ಕೋಟಿ ರೂ.ಯಷ್ಟು ಏರಿಕೆಯಾಗಿತ್ತು.