ನವದೆಹಲಿ : ಸೀಮಿತ ದೇಶೀಯ ಪ್ರಯಾಣಿಕರ ಹಾರಾಟದ ಸಾಮರ್ಥ್ಯವನ್ನು ಹಿಂದಿನ 45 ಪ್ರತಿಶತಕ್ಕಿಂತ ಶೇ.60ಕ್ಕೆ ಏರಿಕೆ ಮಾಡಿರುವುದಾಗಿ ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
2020ರ ಜೂನ್ 27ರಿಂದ ಇಂದಿನ ದಿನದವರೆಗೆ ದೇಶೀಯ ವಿಮಾನ ಪ್ರಯಾಣಿಕರ ಆಸನ ಸಾಮರ್ಥ್ಯವನ್ನು ಕೇವಲ 45 ಪ್ರತಿಶತಕ್ಕೆ ನಿಗದಿಪಡಿಸಿ ಕೇಂದ್ರವು ಅನುಮತಿ ನೀಡಿತ್ತು. 2020ರ ಮೇ 25ರಿಂದ ನಿಗದಿತ ದೇಶೀಯ ವಿಮಾನಗಳ ಕಾರ್ಯಾಚರಣೆಯ ಆರಂಭಿಕ ಪುನಾರಂಭದ ಬಳಿಕ ಆ ಆದೇಶ ನೀಡಿತ್ತು.
ನಿಗದಿತ ದೇಶೀಯ ಕಾರ್ಯಾಚರಣೆಗಳ ಪ್ರಸ್ತುತ ಸ್ಥಿತಿ ಪರಿಶೀಲಿಸಿದ ಬಳಿಕ ಹಿಂದಿನ ಆದೇಶದ ಭಾಗಶಃ ಮಾರ್ಪಾಡು ಮಾಡಲು ನಿರ್ಧರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ತಿಳಿಸಿದೆ.
ದೇಶೀಯ ವಾಯು ಸೇವೆಗಳು ಹಂತಹಂತವಾಗಿ ಪುನಾರಂಭಗೊಂಡಿದ್ದರೂ ಕೋವಿಡ್-19ರ ಪ್ರಭಾವ ಇನ್ನೂ ಕಡಿಮೆ ಆಗಿಲ್ಲ. ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಿಕೆ ಬಳಿಕ ಪ್ರಯಾಣಿಕರ ವಾಯು ಸೇವೆಗಳನ್ನು ಮಾರ್ಚ್ 25ರಂದು ಸ್ಥಗಿತಗೊಳಿಸಲಾಯಿತು. ದೇಶೀಯ ವಿಮಾನ ಸೇವೆ ಮಾತ್ರ ಮೇ 25ರಿಂದ ಪುನಾರಂಭಗೊಂಡವು.