ಮುಂಬೈ: ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದ (ಇಡಿ) ವಶದಲ್ಲಿದ್ದ ಯೆಸ್ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಏಪ್ರಿಲ್ 2ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರುವಂತೆ ಇಡಿಯ ವಿಶೇಷ ನ್ಯಾಯಾಲಯ ಆದೇಶಿಸಿದೆ.
ರಾಣಾ ಕಪೂರ್ ಅವರನ್ನು ಮಾರ್ಚ್ 16ರವರೆಗೆ ಇಡಿ ಅಧೀನದಲ್ಲಿ ಇರಿಸಿಕೊಳ್ಳಲು ನ್ಯಾಯಾಲಯ ಮಾರ್ಚ್ 11ರಂದು ಅನುಮತಿ ನೀಡಿತ್ತು. ಬಳಿಕ ಅದನ್ನು ಮಾ.20ಕ್ಕೆ ವಿಸ್ತರಿಸಿತ್ತು. ಇಂದು ವಿಚಾರಣೆ ನಡೆಸಿದ ಕೋರ್ಟ್, ರಾಣಾ ಅವರನ್ನು ಇಡಿಯಿಂದ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಈ ಹಿಂದಿನ ಆದೇಶದಂತೆ ಐದು ದಿನಗಳ ಕಾಲ ತನ್ನ ವಶದಲ್ಲಿ ಇರಿಸಿಕೊಂಡಿದ್ದ ಇಡಿ, ಇಂದು ಕೋರ್ಟ್ ಮುಂದೆ ಹಾಜರಿಪಡಿಸಿತು. ಯೆಸ್ ಬ್ಯಾಂಕ್ ಸಂಸ್ಥಾಪಕನನ್ನು ಮಾರ್ಚ್ 7ರಂದು ಮುಂಬೈನ ನಿವಾಸದಲ್ಲಿ ಬಂಧಿಸಿತು.
ಇಡಿ ಅಧಿಕಾರಿಗಳು ಯೆಸ್ ಬ್ಯಾಂಕ್ ಹಾಗೂ ಡಿಎಚ್ಎಫ್ಎಲ್ ನಡುವಿನ ಹಣಕಾಸು ವರ್ಗಾವಣೆಯ ಕುರಿತು ಇನ್ನಷ್ಟು ವಿಚಾರಣೆ ನಡೆಸಬೇಕಿದೆ ಎಂದು ಕೋರ್ಟ್ಗೆ ಮೌಖಿಕ ಮನವಿ ಮಾಡಿದರು. ಇವರ ಕೋರಿಕೆ ಪುರಸ್ಕರಿಸಿದ ನ್ಯಾಯಾಲಯ ಐದು ದಿನಗಳ ಕಾಲಾವಕಾಶ ನೀಡಿತ್ತು. ಅದು ಇಂದಿಗೆ ಮುಕ್ತಾಯವಾಗಿದೆ. ಹೀಗಾಗಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.