ನವದೆಹಲಿ: ಕ್ಯಾಪ್ಜೆಮಿನಿ ಗ್ರೂಪ್‌ನ ಅನುಭವಿ ಥಿಯೆರಿ ಡೆಲಾಪೋರ್ಟೆ ಅವರನ್ನು ದೇಶದ ಪ್ರತಿಷ್ಠಿತ ವಿಪ್ರೋ ಐಟಿ ಸಂಸ್ಥೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಿದೆ ಎಂದು ಸಂಸ್ಥೆಯು ತಿಳಿಸಿದೆ.
ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಸೇವಾ ಸಂಸ್ಥೆಯಾಗಿರುವ ವಿಪ್ರೋ ಟೆಕ್ನಾಲಜೀಸ್ ಈ ವರ್ಷದ ಜನವರಿಯಲ್ಲಿ ಸಿಇಒ ಅಬಿದಾಲಿ ಜೆಡ್ ನೀಮೂಚವಾಲಾ ಅವರನ್ನು ಕೆಳಗಿಳಿಸಲು ನಿರ್ಧರಿಸಿದೆ ಎಂದು ಹೇಳಿತ್ತು. ನೀಮುಚವಾಲಾ ಅವರು ಜೂನ್ 1ರಂದು ಸಿಇಒ ಮತ್ತು ಎಂಡಿ ಹುದ್ದೆ ತ್ಯಜಿಸಲಿದ್ದಾರೆ. 2020ರ ಜುಲೈ 6ರಿಂದ ಡೆಲಾಪೋರ್ಟೆ ಆ ಹುದ್ದೆಗೆ ಏರಲಿದ್ದಾರೆ.
ಜುಲೈ 5ರವರೆಗೆ ಕಂಪನಿಯ ನಿತ್ಯದ ಕಾರ್ಯಾಚರಣೆಗಳನ್ನು ರಿಷಾದ್ ಪ್ರೇಮ್‌ಜಿ ಅವರು ನೋಡಿಕೊಳ್ಳಲಿದ್ದಾರೆ ಎಂದು ವಿಪ್ರೋ ಪ್ರಕಟಣೆಯಲ್ಲಿ ತಿಳಿಸಿದೆ.
ಥಿಯೆರಿ ಡೆಲಾಪೋರ್ಟೆ ಕ್ಯಾಪ್ಜೆಮಿನಿ ಗ್ರೂಪ್‌ನ ಸಿಇಒ ಆಗಿದ್ದರು. ಅದರ ಗುಂಪು ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿದ್ದರು. ಕ್ಯಾಪ್ಜೆಮಿನಿ ಅವರ 25 ವರ್ಷಗಳ ವೃತ್ತಿಜೀವನದಲ್ಲಿ ಹಲವು ನಾಯಕತ್ವ ಪಾತ್ರಗಳನ್ನು ನಿರ್ವಹಿಸಿದ್ದರು ಎಂದು ಹೇಳಿದೆ.