ನವದೆಹಲಿ: ಭಾರತದ ವಿವಿಧ ಬ್ಯಾಂಕ್‌ಗಳಲ್ಲಿ 9,000 ಕೋಟಿ ರೂ. ಸಾಲ ಮಾಡಿ ಮರುಪಾವತಿಸದೇ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಹಸ್ತಾಂತರಕ್ಕೆ 'ಗೌಪ್ಯ ಕಾನೂನು ಸಮಸ್ಯೆ ತಡೆಯುತ್ತಿದೆ' ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ದಿವಾಳಿ ಆಗಿರುವ ವಿಜಯ್ ಮಲ್ಯ ಲಂಡನ್ನಲ್ಲಿ ತಲೆ ಮರೆಸಿಕೊಂಡಿದ್ದಾರೆ. ಭಾರತಕ್ಕೆ ಹಸ್ತಾಂತರಿಸುವ ಹಾದಿಯನ್ನು ಇಂಗ್ಲೆಂಡ್ನ ನ್ಯಾಯಾಲಯ ಸಾಧ್ಯವಾದಷ್ಟು ಸುಗಮಗೊಳಿಸಿದೆ. 'ಗೌಪ್ಯ ಕಾನೂನು ಸಮಸ್ಯೆಯೊಂದೆ ತಡೆಯುತ್ತಿದೆ ಮತ್ತು ವಿದೇಶಾಂಗ ಸಚಿವಾಲಯವು ಸರ್ಕಾರ ನಡೆಯನ್ನು ಅನುಸರಿಸುತ್ತಿದೆ' ಎಂದು ಸಚಿವಾಲಯ ತಡೆ ಹಿಂದಿನ ಕಾರಣ ಸ್ಪಷ್ಟನೆ ಪಡಿಸಿದೆ.
ಗೌಪ್ಯ ಕಾನೂನು ಸಮಸ್ಯೆಯಿದೆ ಎಂದು ನಮಗೆ ತಿಳಿಸಲಾಗಿದೆ. ಅದನ್ನು ಪರಿಹರಿಸುವ ಅಗತ್ಯವಿದೆ. ಅದಾದ ನಂತರ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಬಹುದು. ಯಾವುದೇ ನಿರ್ದಿಷ್ಟ ಗಡುವು ನಮಗೆ ಸೂಚಿಸಿಲ್ಲ. ನಾವು ಯುಕೆ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಮುಂದುವರಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದ್ದಾರೆ.