ಲಂಡನ್: ಮದ್ಯದ ಉದ್ಯಮಿ/ ದೇಶ ತೊರೆದ ಆರ್ಥಿಕ ಅಪರಾಧಿ ವಿಜಯ್ ಮಲ್ಯ ತಮ್ಮ ಪುತ್ರ ಸಿದ್ಧಾರ್ಥ್ ಮಲ್ಯ ಜೊತೆಗೆ ಲಂಡನ್ ಹೈಕೋರ್ಟ್ಗೆ ವಿಚಾರಣೆಗೆ ಹಾಜರಾಗಿದ್ದರು.
ಕಳೆದ ವರ್ಷದ ಡಿಸೆಂಬರ್ನಲ್ಲಿ ಗಡಿಪಾರು ಸಂಬಂಧ ವಿಚಾರಣೆ ನಡೆಸಿದ್ದ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ವಿಜಯ್ ಮಲ್ಯ ಸಾಲ ತೀರಿಸದೇ ದೇಶ ಬಿಟ್ಟು ಬಂದಿರುವುದಕ್ಕೆ ಸಾಕ್ಷ್ಯಾಧಾರಗಳಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಡಿಸೆಂಬರ್ನಲ್ಲಿ ಆದೇಶ ನೀಡಿತ್ತು.
ಈ ಗಡಿಪಾರು ಆದೇಶದ ವಿರುದ್ಧ ಮಲ್ಯ ಲಂಡನ್ ಹೈಕೋರ್ಟ್ನ ದ್ವಿಸದಸ್ಯ ಪೀಠದ ಮುಂದೆ ಏಪ್ರಿಲ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಜುಲೈ 2ರಂದು ಅರ್ಜಿಯನ್ನು ಪರಿಶೀಲಿಸಿದ ದ್ವಿಸದಸ್ಯ ಪೀಠವು ವಿಚಾರಣೆಗೆ ಅಂಗೀಕರಿಸಿತ್ತು. ಅರ್ಜಿಯ ವಿಚಾರಣೆ ಇಂದಿನಿಂದ ಆರಂಭವಾಗಿದ್ದು, ವಿಜಯ್ ಮಲ್ಯ ಅವರೊಂದಿಗೆ ಪುತ್ರ ಸಿದ್ಧಾರ್ಥ್ ಕೋರ್ಟ್ಗೆ ಹಾಜರಾಗಿದ್ದರು.
ಕಪ್ಪು ಕೋಟು, ಶ್ವೇತ ವರ್ಣದ ಅಂಗಿ ಹಾಗೂ ಟೈ ಧರಿಸಿ ಉದ್ಯಮಿ ಗತ್ತಿನಲ್ಲಿ ಬಂದ ಮಲ್ಯ, ಸಿಗರೇಟ್ ಸೇದುತ್ತಾ ಕೆಲಹೊತ್ತು ಕೋರ್ಟ್ ಮುಂಭಾಗದಲ್ಲಿ ನಿಂತರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಅವರನ್ನು ಮಾತನಾಡಲು ಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.